ಬೆಳಗಾವಿ: ಕಳೆದ ಮೂರು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ವಿವಾಹಿತೆಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಜ್ಯೋತಿ ಚೋಪ್ಡೆ (19) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ಕಳೆದ ಮೂರು ತಿಂಗಳ ಹಿಂದಷ್ಟೇ ಉಚಗಾಂವ ಮೂಲದ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ನಿಖಿಲ್ ಚೋಪ್ಡೆ ಜೊತೆ ಮದುವೆ ಮಾಡಿಕೊಂಡಿದ್ದರು.
ತವರು ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ ಜ್ಯೋತಿ ಕಳೆದ ಹಲವು ದಿನಗಳ ಹಿಂದಷ್ಟೇ ತವರು ಮನೆಗೆ ಉಳಿದುಕೊಳ್ಳಲು ಬಂದಿದ್ದಳು. ಆದರೆ, ಇಂದು ಮನೆಯಲ್ಲಿ ಕುಟುಂಬಸ್ಥರು ಯಾರು ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮದುವೆ ಆಗಿ ಮೂರು ತಿಂಗಳು ಕಳೆಯುವಷ್ಟರಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಕುಟುಂಬಸ್ಥರಿಗೆ ದುಃಖ ಉಂಟುಮಾಡಿದೆ. ಯುವತಿಯ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.