ಬೆಳಗಾವಿ:ಮೂರು ದಿನಗಳ ಹಿಂದೆ ಸಂಪುಟ ವಿಸ್ತರಣೆ ವೇಳೆ ಪ್ರಮಾಣ ವಚನ ಸ್ವೀಕರಿಸಿರುವ ನೂತನ ಸಚಿವರಿಗೆ ಇಂದು, ಇಲ್ಲವೇ ನಾಳೆ ಖಾತೆ ಹಂಚಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ನೂತನ ಸಚಿವ ಉಮೇಶ್ ಕತ್ತಿ ಬೆಂಗಳೂರಿಗೆ ದೌಡಾಯಿಸಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಉಮೇಶ್ ಕತ್ತಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಇಂಧನ ಇಲ್ಲವೇ ಇತರ ಪ್ರಭಾವಿ ಖಾತೆ ಮೇಲೆ ಉಮೇಶ್ ಕತ್ತಿ ಕಣ್ಣಿಟ್ಟಿದ್ದಾರೆ. ಸಿಎಂ ಮೇಲೆ ಪ್ರಭಾವ ಬೀರಲು ಬೆಂಗಳೂರಿಗೆ ತೆರಳಿರುವ ಸಚಿವ ಉಮೇಶ್ ಕತ್ತಿ ಸಿಎಂ ನಿವಾಸಕ್ಕೆ ತೆರಳಲಿದ್ದಾರೆ. ಬಳಿಕ ಸಿಎಂ ಭೇಟಿಯಾಗಿ ಪ್ರಭಾವಿ ಖಾತೆ ನೀಡುವಂತೆ ಪಟ್ಟು ಹಿಡಿಯುವ ಸಾಧ್ಯತೆ ಇದೆ.
ಓದಿ: ಸದ್ದು ಮಾಡಿದ ಖಾಕಿ ಪಿಸ್ತೂಲ್: ಬೆಂಗಳೂರಲ್ಲಿ ರೌಡಿಶೀಟರ್ ಕಾಲಿಗೆ ಗುಂಡು
ಈಗಾಗಲೇ ಜಿಲ್ಲೆಯಲ್ಲಿ ನಾಲ್ವರು ಸಚಿವರಿದ್ದಾರೆ. ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಜೊತೆಗೆ ಸಾರಿಗೆ ಖಾತೆ ನೀಡಲಾಗಿದೆ. ರಮೇಶ್ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಖಾತೆ ಹಂಚಿಕೆ ಮಾಡಲಾಗಿದೆ. ಶಶಿಕಲಾ ಜೊಲ್ಲೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಖಾತೆ ಮತ್ತು ಶ್ರೀಮಂತ ಪಾಟೀಲ ಅವರಿಗೆ ಜವಳಿ ಖಾತೆ ನೀಡಲಾಗಿದೆ. ಹೀಗಾಗಿ ಹಿರಿಯ ರಾಜಕಾರಣಿ ಆಗಿರುವ ಉಮೇಶ್ ಕತ್ತಿ ಅವರು ತಮಗೆ ಪ್ರಭಾವಿ ಖಾತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.