ಬೆಳಗಾವಿ : ನೇಕಾರರ ಸೀರೆಗಳನ್ನು ಖರೀದಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಜಿಲ್ಲಾ ನೇಕಾರರ ವೇದಿಕೆ ನೇತೃತ್ವದಲ್ಲಿ ನೇಕಾರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನೇಕಾರರ ಸೀರೆ ಖರೀದಿ ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ
ನೇಕಾರರ 15 ಲಕ್ಷ ಸೀರೆಗಳನ್ನು ದೀಪಾವಳಿಗೆ ಖರೀದಿ ಮಾಡುವುದಾಗಿ ಭರವಸೆ ನೀಡಿದ್ದ ರಾಜ್ಯದ ಸಿಎಂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಸೀರೆ ಖರೀದಿಗೆ ಮುಂದಾಗುವ ಮೂಲಕ ನೇಕಾರರ ಬದುಕನ್ನು ಉತ್ತೇಜನಗೊಳಿಸಬೇಕೆಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೊರೊನಾ ಹಿನ್ನೆಲೆ ರಾಜ್ಯದ ಎಲ್ಲ ನೇಕಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೇ 90 ರಷ್ಟು ನೇಕಾರಿಕೆ ಉದ್ಯೋಗ ಸ್ಥಗಿತಗೊಂಡಿದೆ. ಅನೇಕ ಜನರು ಆರ್ಥಿಕ ಸಂಕಷ್ಟದಿಂದ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ನೇಕಾರರ 15 ಲಕ್ಷ ಸೀರೆಗಳನ್ನು ದೀಪಾವಳಿಗೆ ಖರೀದಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹಾಗಾಗಿ ಕೂಡಲೇ ಸರ್ಕಾರ ಸೀರೆ ಖರೀದಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಖಾಸಗೀಕರಣ ಮಾಡುವುದರಿಂದ ನೇಕಾರರಿಗೆ ನೀಡಲಾಗುವ ಪ್ರತಿ ಯೂನಿಟ್ಗೆ 1 ರೂ. 50 ಪೈ ಸಹಾಯಧನ ಸ್ಥಗಿತವಾಗುತ್ತದೆ. ಇದರಿಂದಾಗಿ ಪ್ರತಿ ಸೀರೆಗೆ 20 ರೂ. ಹೊರೆಯಾಗಲಿದೆ. ಹಾಗಾಗಿ ವಿದ್ಯುತ್ ಖಾಸಗೀಕರಣ ನಿರ್ಧಾರ ಕೈಬಿಡಬೇಕು. ಜವಳಿ ಇಲಾಖೆಯಿಂದ ನೇಕಾರರಿಗೆ ಸಿಗಬೇಕಾದ ಸೌಲಭ್ಯಗಳು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ರಾಜ್ಯದಲ್ಲಿನ ಕೂಲಿ ನೇಕಾರರನ್ನು ಕಟ್ಟಡ ಕಾರ್ಮಿಕರ ವ್ಯಾಪ್ತಿಗೆ ಸೇರಿಸಬೇಕು. ಬೆಂಗಳೂರಿನಲ್ಲಿರುವ ಜವಳಿ ಅಭಿವೃದ್ಧಿ ನಿಗಮವನ್ನು ಬೆಳಗಾವಿ ಸ್ಥಳಾಂತರ ಮಾಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.