ಕರ್ನಾಟಕ

karnataka

ETV Bharat / state

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ: ಎನ್‌ಸಿಪಿ ಶಾಸಕ ರೋಹಿತ್​ ಪವಾರ್ ಬೆಳಗಾವಿಗೆ ಗೌಪ್ಯ ಭೇಟಿ

ಮಹಾ ವಿಕಾಸ ಅಘಾಡಿ ನಾಯಕರ ಸೂಚನೆ ಮೇರೆಗೆ ಎನ್‌ಸಿಪಿ ಶಾಸಕ ರೋಹಿತ್​ ಪವಾರ್ ಗುಪ್ತವಾಗಿ ಬೆಳಗಾವಿಗೆ ಭೇಟಿ ನೀಡಿದ್ದಾರೆ. ಅಲ್ಲದೇ ಹಲವು ಸ್ಥಳಗಳಿಗೆ ಭೇಟಿ ನೀಡಿ, ಮರಳಿ ಮಹಾರಾಷ್ಟ್ರಕ್ಕೆ ವಾಪಸ್​ ಆಗಿದ್ದಾರೆ.

Rohit Pawar secretly visits Belagavi
ರೋಹಿತ್​ ಪವಾರ್ ಗೌಪ್ಯವಾಗಿ ಬೆಳಗಾವಿಗೆ ಭೇಟಿ

By

Published : Dec 13, 2022, 12:18 PM IST

Updated : Dec 13, 2022, 12:29 PM IST

ಎನ್‌ಸಿಪಿ ಶಾಸಕ ರೋಹಿತ್​ ಪವಾರ್ ಬೆಳಗಾವಿಗೆ ಗೌಪ್ಯ ಭೇಟಿ

ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಮಧ್ಯೆಯೇ ಎನ್‌ಸಿಪಿ ಶಾಸಕ ರೋಹಿತ್​ ಪವಾರ್​ ಗಪ್​​ಚುಪ್​ ಆಗಿ ಬೆಳಗಾವಿಗೆ ಭೇಟಿ ನೀಡಿದ್ದಾರೆ. ಮಹಾ ವಿಕಾಸ ಅಘಾಡಿ ನಾಯಕರ ಸೂಚನೆ ಮೇರೆಗೆ ಭೇಟಿ ನೀಡಿದ್ದಾರೆ ಎನ್ನಲಾಗ್ತಿದೆ.

ರೋಹಿತ್​ ಪವಾರ್​ ಪುಣೆ ಜಿಲ್ಲೆಯ ಕರ್ಜತ್-ಜಮ್ಕೆಡ್ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದಾರೆ. ಕೊಲ್ಲಾಪುರ- ಕುಗನೊಳ್ಳಿ ಮಾರ್ಗವಾಗಿ ಸೋಮವಾರ ರಾತ್ರಿಯೇ ಅವರು ಬೆಳಗಾವಿಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ. ಮಂಗಳವಾರ ಬೆಳಗ್ಗೆ ಬೆಳಗಾವಿ ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದಾರೆ.

ಅಷ್ಟೇ ಅಲ್ಲದೇ ಅನಾರೋಗ್ಯಕ್ಕೆ ತುತ್ತಾಗಿರುವ ಎಂಇಎಸ್ ಬೆಳಗಾವಿ ನಗರ ಅಧ್ಯಕ್ಷ ದೀಪಕ್ ದಳವಿ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ. ನಂತರ ಗೋಲಿಬಾರ್‌ನಲ್ಲಿ ಮೃತಪಟ್ಟವರ ಹೆಸರಿನಲ್ಲಿ ನಿರ್ಮಿಸಲಾದ ಹುತಾತ್ಮ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಕರ್ನಾಟಕ ಸೇರಲು 11 ಗ್ರಾ. ಪಂಚಾಯಿತಿಗಳಿಂದ ಠರಾವು: ವಿಸರ್ಜನೆ ಎಚ್ಚರಿಕೆ ನೀಡಿದ 'ಮಹಾ' ಸರ್ಕಾರ

ಅಲ್ಲದೇ ಯಳ್ಳೂರ ಗ್ರಾಮದಲ್ಲಿರುವ ಮಹಾರಾಷ್ಟ್ರ ಹೈಸ್ಕೂಲ್‌ಗೆ ರೋಹಿತ್ ಪವಾರ್ ಭೇಟಿ ನೀಡಿದ್ದಾರೆ. ಎನ್‌ಸಿಪಿ ಶಾಸಕ ರೋಹಿತ್ ಪವಾರ್‌ಗೆ ಸ್ಥಳೀಯ ಎಂಇಎಸ್ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಮಂಗಳವಾರ ಬೆಳಗ್ಗೆಯೇ ಪವಾರ್​ ಮಹಾರಾಷ್ಟ್ರಕ್ಕೆ ಮರಳಿದ್ದಾರೆ. ರೋಹಿತ್ ಪವಾರ್ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಸಹೋದರನ ಪುತ್ರನಾಗಿದ್ದಾರೆ.

ಅಶೋಕ ಚಂದರಗಿ ಕಿಡಿ: ಗಡಿ ವಿವಾದ ಬಗ್ಗೆ ಮಹಾರಾಷ್ಟ್ರ ನಾಯಕರು ಹುಲಿಯಂತೆ ಮಾತನಾಡಿ, ನರಿಯಂತೆ ವರ್ತನೆ ತೋರುತ್ತಿದ್ದಾರೆ ಎಂದು ಎನ್‌ಸಿಪಿ ಶಾಸಕ ರೋಹಿತ್ ಪವಾರ್ ಬೆಳಗಾವಿ ಗಪ್‌ಚುಪ್‌ ಭೇಟಿಗೆ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ವ್ಯಂಗ್ಯವಾಡಿದ್ದಾರೆ.

ಶರದ್ ಪವಾರ ಸಹೋದರನ ಪುತ್ರ, ಶಾಸಕ ರೋಹಿತ್ ಪವಾರ್ ನಿನ್ನೆ ರಾತ್ರಿ ಕಳ್ಳರಂತೆ ಬೆಳಗಾವಿಗೆ ಬಂದು ಹೋಗಿದ್ದಾರೆ. ಶಾಸಕ ಪವಾರ್ ಕಳ್ಳರಂತೆ ಬೆಳಗಾವಿಗೆ ಭೇಟಿ ನೀಡಿರುವುದು ಸೌಜನ್ಯ ಮತ್ತು ಸಭ್ಯತೆ ಮೀರಿದ ವರ್ತನೆ. ರಾಜಕಾರಣದಲ್ಲಿ ಯಾವಾಗಲೂ ನೇರಾನೇರ ಇರಬೇಕು. ಮಹಾರಾಷ್ಟ್ರದಿಂದ ಬೆಳಗಾವಿ ಪ್ರವೇಶಕ್ಕೆ 21 ಚೆಕ್ ಪಾಯಿಂಟ್‌ಗಳಿವೆ. ಆದರೆ, ಬೆಳಗಾವಿಗೆ ಕಳ್ಳರಂತೆ ಬಂದು ಹೋಗಿದ್ದು ರೋಹಿತ್ ಪವಾರ್ ಶೋಭೆಯಲ್ ಎಂದರು.

ಗಡಿವಿವಾದ ಸಂಬಂಧ ಹುಲಿಗಂತೆ ಮಾತನಾಡಿ, ನರಿಯಂತೆ ವರ್ತಿಸುವುದು ಸರಿಯಲ್ಲ. ಬೆಳಗಾವಿಗೆ ಬರುವುದಾದ್ರೆ ಹೇಳಿ ಬರಲಿ, ಚೆನ್ನಮ್ಮ ವೃತ್ತದಲ್ಲಿ ನಿಂತು ಮಾತಾಡಲಿ. ಗಡಿವಿವಾದ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಲಿ, ನಮ್ಮ ನಿಲುವನ್ನೂ ನಾವು ಹೇಳುತ್ತೇವೆ. ಆದರೆ, ಕಳ್ಳರ ರೀತಿ ಬೆಳಗಾವಿಗೆ ಬರುವುದು ತಪ್ಪು. ಗಡಿವಿವಾದ ಸಂಬಂಧ ಮಹಾರಾಷ್ಟ್ರ ನಾಯಕರು ವೀರಾವೇಶದ ಹೇಳಿಕೆ ನೀಡುತ್ತಾರೆ. ಆದರೆ, ಎನ್‌ಸಿಪಿ ಶಾಸಕ ಕಳ್ಳರಂತೆ ವರ್ತನೆ ತೋರಿರುವುದು ಹಾಸ್ಯಾಸ್ಪದ ಎಂದು ಕಿಡಿ ಕಾರಿದ್ದಾರೆ.

Last Updated : Dec 13, 2022, 12:29 PM IST

ABOUT THE AUTHOR

...view details