ಕರ್ನಾಟಕ

karnataka

ETV Bharat / state

ಬೆಳಗಾವಿ: ಎಂಇಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್ ಭಾಗಿ - ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್

1986ರಲ್ಲಿ ಗಡಿ ಗಲಾಟೆಯಲ್ಲಿ ಮೃತಪಟ್ಟ ಮರಾಠಿ ಭಾಷಿಕರಿಗೆ ಎಂಇಎಸ್ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್ ಪಾಲ್ಗೊಂಡಿದ್ದರು.

Etv Bharat
Etv Bharat

By

Published : Jun 1, 2023, 10:25 PM IST

ಬೆಳಗಾವಿ: ತಾಲೂಕಿನ ಹಿಂಡಲಗಾ ಗ್ರಾಮದ ಹುತಾತ್ಮ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ನಾಡದ್ರೋಹಿ ಎಂಬ ಘೋಷಣೆ ಕೂಗುವ ಮೂಲಕ ಮತ್ತೆ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡಿದ್ದಾರೆ. 1986ರಲ್ಲಿ ಗಡಿ ಗಲಾಟೆಯಲ್ಲಿ ಮೃತಪಟ್ಟ ಮರಾಠಿ ಭಾಷಿಕರಿಗೆ ಎಂಇಎಸ್ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್ ಕೂಡ ಭಾಗಿಯಾಗುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಕಾರಣರಾಗಿದ್ದಾರೆ.

ಈ ವೇಳೆ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಲೇಬೇಕು ಎಂದು ಎಂಇಎಸ್ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್, ಎನ್‌ಸಿಪಿ ನಾಯಕರಾದ ಶರದ್ ಪವಾರ್, ಜಯಂತ್ ಪಾಟೀಲ್ ಸೂಚನೆ ಮೇರೆಗೆ ಇಲ್ಲಿ ಆಗಮಿಸಿದ್ದೇನೆ. ಗಡಿವಿವಾದ ಜೊತೆ ನನ್ನ ಹಾಗೂ ಚಂದಗಡ, ಆಜರಾ, ಗಡಹಿಂಗ್ಲಜ್ ತಾಲೂಕಿನ ಸಂಬಂಧ ಹಲವು ವರ್ಷಗಳಿಂದ ಇದೆ.. ಇರುತ್ತೆ. ಗಡಿ ಹೋರಾಟದಲ್ಲಿ ಮಾಜಿ ಶಾಸಕ ದಿ.ನರಸಿಂಗ್ ಗುರುನಾಥ್ ಪಾಟೀಲ್ ಕೊಡುಗೆ ನಿಮಗೆಲ್ಲ ಗೊತ್ತು ಎಂದು ಹೇಳಿದರು.

ಈ ಬಾರಿ ಕರ್ನಾಟಕದ ಚುನಾವಣೆ ವೇಳೆ ಶರದ್ ಪವಾರ್ ಮತ್ತು ನಾವು ಎಲ್ಲರೂ ಸೇರಿ ನಿರ್ಣಯ ಮಾಡಿದ್ದೆವು. 2023ರ ಚುನಾವಣೆಯಲ್ಲಿ ಎಂಇಎಸ್ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ನಿರ್ಧರಿಸಿದ್ದೆವು. ಶರದ್ ಪವಾರ್, ಉದ್ಧವ್ ಠಾಕ್ರೆ ಎಲ್ಲರೂ ಸೇರಿ ನಿರ್ಣಯ ಮಾಡಿದ್ದೇವು. ಐದು ಕ್ಷೇತ್ರಗಳಲ್ಲಿ ಎಂಇಎಸ್ ಪರ ಒಳ್ಳೆಯ ವಾತಾವರಣ ಇತ್ತು. ಎರಡ್ಮೂರು ಕ್ಷೇತ್ರಗಳಲ್ಲಿ ಗೆಲ್ಲುತ್ತೆವೆಂಬ ಆಶಾವಾದ ಇತ್ತು. ಆದರೆ, ರಾಜಕೀಯ ಜೀವನದಲ್ಲಿ ಸೋಲು, ಗೆಲುವು ಇದ್ದೆ ಇರುತ್ತೆ. ಹೀಗಾಗಿ ಎದೆಗುಂದದೆ ಅದೇ ಭರವಸೆ, ಅದೇ ಶಕ್ತಿ ಇಟ್ಟುಕೊಂಡು ಮುನ್ನಡೆಯಬೇಕು ಎಂದರು.

ಗಡಿವಿವಾದ ಸದ್ಯ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ. ಮಹಾರಾಷ್ಟ್ರ ಸರ್ಕಾರಕ್ಕೆ ನಿಮ್ಮ ಪ್ರತಿನಿಧಿಯಾಗಿ ನಾನು ಮನವಿ ಮಾಡಿಕೊಳ್ಳುವೆ. ಆದಷ್ಟು ಬೇಗ ಈ ವಿವಾದ ಬಗೆಹರಿಸಿ ನಿಮಗೆ ನ್ಯಾಯ ದೊರಕಿಸಿಕೊಡಲು ಸೂಕ್ತ ಕ್ರಮಕ್ಕೆ ಮನವಿ ಮಾಡುವೆ. ನಮ್ಮ ನಾಯಕರಾದ ಶರದ್ ಪವಾರ್, ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಎಲ್ಲ ಸಂಸದರು, ಶಾಸಕರು ಗಡಿವಿವಾದ ಗಂಭೀರವಾಗಿ ಪರಿಗಣಿಸಿ ಕೇಂದ್ರದ ಮೇಲೆ ಒತ್ತಡ ಹಾಕುತ್ತಾರೆ ಎಂದು ಹೇಳಿದರು.

ಮಹಾರಾಷ್ಟ್ರ ಸರ್ಕಾರ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕು. ಸುಪ್ರೀಂಕೋರ್ಟ್​ನಲ್ಲಿ ಒಳ್ಳೆಯ ವಕೀಲರ ನೇಮಿಸಿ ಅವರು ಕೇಳಿದ ಸಾಕ್ಷ್ಯಗಳನ್ನು ಆದಷ್ಟು ಬೇಗ ಒದಗಿಸಬೇಕು. 66 ವರ್ಷಗಳಿಂದ ಸರ್ವಾಧಿಕಾರ ಧೋರಣೆ ವಿರುದ್ಧ ನೀವು ಹೋರಾಡುತ್ತಿದ್ದೀರಿ. ನಿಮ್ಮೆಲ್ಲರ ಭಾವನೆಗಳನ್ನು ಪರಿಗಣಿಸಿ ಸುಪ್ರೀಂಕೋರ್ಟ್ ಯೋಗ್ಯ ನಿರ್ಣಯ ಕೈಗೊಳ್ಳುವ ಭರವಸೆ ಇದೆ. ಮಹಾರಾಷ್ಟ್ರ ಸರ್ಕಾರದ ವತಿಯಿಂದಲೂ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವೆ ಎಂದು ಶಾಸಕ ರಾಜೇಶ್ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ:ಎಂಇಎಸ್ ಮುಖಂಡರಿಗೆ ಬದ್ಧಿ ಮಾತು ಹೇಳಿದ ಎಡಿಜಿಪಿ ಅಲೋಕ್ ಕುಮಾರ್

ABOUT THE AUTHOR

...view details