ಚಿಕ್ಕೋಡಿ : ದೇಶದಲ್ಲಿ ಬಹಳ ಹಿಂದಿನಿಂದಲೂ ನಾಟಿ ವೈದ್ಯಕೀಯ ಚಿಕಿತ್ಸೆ ಎಂಬುದು ಪ್ರಸಿದ್ಧಿಯನ್ನು ಪಡೆದಿದೆ. ಅದರಂತೆಯೇ ಚಿಕ್ಕೋಡಿಯಲ್ಲೊಬ್ಬರು ಪರಂಪರೆಯ ನಾಟಿ ವೈದ್ಯ ಚಿಕಿತ್ಸೆಯನ್ನು ಬಳಸಿಕೊಂಡು ಅಸಂಖ್ಯಾತ ರೋಗಿಗಳಿಗೆ ಚಿಕಿತ್ಸೆ ನೀಡಿ ಅನಾರೋಗ್ಯದ ಸಮಸ್ಯೆ ಹೋಗಲಾಡಿಸಿ ಎಲೆಮರೆ ಕಾಯಿಯಂತೆ ತಮ್ಮ ವೈದ್ಯ ಪದ್ಧತಿಯನ್ನು ಮುನ್ನಡೆಸಿಕೊಂಡು ಹೋಗಿ ಬಡ ರೋಗಿಗಳ ಬಾಳಲ್ಲಿ ಸಂಜೀವಿನಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಮುರಗೇಪ್ಪಾ ಸಿದ್ದಾ ಉಗಾರೆ ಎಂಬುವವರು ಪಾರಂಪರಿಕವಾಗಿ ಪಂಚಕರ್ಮ ಚಿಕಿತ್ಸೆ ನೀಡುತ್ತಾ ಬಡವರ ಪಾಲಿಗೆ ದೇವರಂತೆ ಕೆಲಸ ಮಾಡುತ್ತಾ ಅಲ್ಪ ಹಣದಲ್ಲಿ ನರ ರೋಗ, ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುತ್ತಾರೆ. ಗಿಡಮೂಲಿಕೆಗಳಿಂದ ತಯಾರಾದ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಒಂದು ಬಟ್ಟೆ ತುಂಡಿನಿಂದ ಮುರಿತವಾದ ಸ್ಥಳಕ್ಕೆ ಕಟ್ಟಿ ಚಿಕಿತ್ಸೆ ನೀಡುತ್ತಾರೆ.
ಜಿಲ್ಲೆಗಳ ಜನರಿಗೆ ಸಂಜೀವಿನಿ: ಕಳೆದ 30 ವರ್ಷಗಳಿಂದ ನಾಟಿ ಚಿಕಿತ್ಸೆ ನೀಡುತ್ತಾ ಪಕ್ಕದ ಮಹಾರಾಷ್ಟ್ರ ರಾಜ್ಯ ಮತ್ತು ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಜನರಿಗೆ ಸಂಜೀವಿನಿಯಾಗಿದ್ದಾರೆ. ನರದ ತೊಂದರೆ, ಮೂಳೆ ಮುರಿತವನ್ನು ಕೈಯಿಂದ ಮುಟ್ಟಿನೋಡಿ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೆ. ಕೂಲಿ ಕಾರ್ಮಿಕರು, ಆಟೋ ಡ್ರೈವರ್ ಸೇರಿದಂತೆ ಎಲ್ಲ ವರ್ಗದ ಜನರೂ ಇವರ ಬಳಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿದ್ದು ಕೈ ಕಾಲಿಗೆ ಪೆಟ್ಟಾದರೆ, ನಡೆಯುವಾಗ ಆಯತಪ್ಪಿ ಬಿದ್ದು ಕಾಲು ಉಳುಕಿದರೆ, ಅವಘಡಗಳಲ್ಲಿ ಸಿಕ್ಕಿ ಕಾಲು ಮುರಿದ ತಕ್ಷಣ ಈ ನಾಟಿ ವೈದ್ಯರ ಹತ್ತಿರ ಬಂದು ಜನರು ಚಿಕಿತ್ಸೆ ಪಡೆಯುತ್ತಾರೆ.
ದೀರ್ಘಕಾಲಿಕ ಚಿಕಿತ್ಸೆ:ಮೊಳಕಾಲು ನೋವು, ನರ ತೊಡಕು ಸಮಸ್ಯೆಯಿಂದ ದಿನಂಪ್ರತಿ ಹತ್ತಾರು ಆಸ್ಪತ್ರೆ ಅಲೆದು ಗುಣಮುಖರಾಗದೆ, ಇವರ ಬಳಿ ಚಿಕಿತ್ಸೆ ಪಡೆದು ಗುಣಮುಖರಾದ ಹಲವರು ಇವರ ಕೈಗುಣ, ಚಿಕಿತ್ಸೆ ಕುರಿತು ಹಾಡಿ ಹೊಗಳಿ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ದೇಹದ ಯಾವುದೇ ನರ ನಾಡಿಗಳು ಮೂಳೆಗೆ ತೊಂದರೆಯಾದರೂ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡುತ್ತಾರೆ. ಮೂಳೆ ಮುರಿತದ ತೀವ್ರತೆಯನ್ನು ಆಧರಿಸಿ 3 ದಿನದ ಅಲ್ಪಾವಧಿ ಚಿಕಿತ್ಸೆಯಿಂದ - ಆರು ತಿಂಗಳ ದೀರ್ಘಕಾಲಿಕ ಚಿಕಿತ್ಸೆಯನ್ನೂ ನೀಡಿ ಸರಿಪಡಿಸುತ್ತಾರೆ.