ಬೆಳಗಾವಿ:ಪಾಟ್ನಾದಲ್ಲಿ ತೃತೀಯ ರಂಗದ ನಾಯಕರು ಸಭೆ ಮಾಡಿದ್ದಾರೆ. ಅಲ್ಲಿ ದೇಶದ ಉದ್ಧಾರದ ಬಗ್ಗೆ ಚರ್ಚೆ ಆಗಿಲ್ಲ, ನರೇಂದ್ರ ಮೋದಿ ಅವರನ್ನು ಹೇಗೆ ಸೋಲಿಸಬೇಕು. ರಾಹುಲ್ ಗಾಂಧಿಗೆ ಮದುವೆ ಮಾಡುವ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯ ಗಾಂಧಿ ಭವನದಲ್ಲಿ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಸೋಲಲ್ಲ. ರಾಹುಲ್ ಗಾಂಧಿಗೆ ಮದುವೆ ಆಗೋದಿಲ್ಲ. ಮೋದಿಗೆ ಪರ್ಯಾಯವಾಗಿ ಒಬ್ಬ ನಾಯಕನ ಸೃಷ್ಟಿ ಮಾಡಲಾಗದಿರುವ ನಿಮ್ಮನ್ನು ಜನ ಹೇಗೆ ಆಯ್ಕೆ ಮಾಡುತ್ತಾರೆ. ನರೇಂದ್ರ ಮೋದಿ ಅವರಿಗೆ ಇಡೀ ದೇಶದಲ್ಲಿ ಎದುರಿಗೆ ನಿಲ್ಲುವಂತ ಒಬ್ಬನೇ ಒಬ್ಬ ನಾಯಕ ಯಾವುದೇ ವಿರೋಧ ಪಕ್ಷದಲ್ಲಿಲ್ಲ. ಮೋದಿ ನಾಯಕತ್ವ ಇಡೀ ದೇಶ ಒಪ್ಪಿಕೊಂಡಿದೆ. ಹೀಗಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. 25 ಸ್ಥಾನ ಮತ್ತೆ ರಾಜ್ಯದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಮಕೃಷ್ಣ ಹೆಗಡೆ ಅವರು ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಅವರು ಸರ್ಕಾರವನ್ನು ವಿಸರ್ಜಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಮತ್ತೆ ಬಹುಮತದಿಂದ ಹೆಗಡೆ ಸರ್ಕಾರ ಅಧಿಕಾರಕ್ಕೆ ಬಂದಿತು. ಅದೇ ರೀತಿ 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಆದರೂ ನಾವು 18 ಸ್ಥಾನ ಗೆದ್ದಿದ್ದೆವು. ಇದಾದ ಬಳಿಕ 2019ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದರೂ 28ರಲ್ಲಿ 25 ಸ್ಥಾನಗಳನ್ನು ಗೆದ್ದಿದ್ದೆವು. ಹೀಗಾಗಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ವಿಚಾರಗಳು ಬೇರೆ ಬೇರೆಯಾಗಿರುತ್ತವೆ. ಆದ್ದರಿಂದ ಎಲ್ಲರೂ ಸಂಕಲ್ಪ ಮಾಡಬೇಕು, 28ಕ್ಕೆ 28 ಸ್ಥಾನ ಗೆಲ್ಲಬೇಕು. ಬೆಳಗಾವಿ ಲೋಕಸಭೆಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲು ತಾವೆಲ್ಲಾ ಪಣ ತೊಡಬೇಕು ಎಂದು ಕಾರ್ಯಕರ್ತರಿಗೆ ಬೊಮ್ಮಾಯಿ ಸಲಹೆ ನೀಡಿದರು.
ನೀರು, ಆಕಾಶ, ಭೂಮಿಯಲ್ಲೂ ಕಾಂಗ್ರೆಸ್ ಹಗರಣ: ಕಾಂಗ್ರೆಸ್ ಅವಧಿಯಲ್ಲಿ ದೇಶದಲ್ಲಿ ನೀರು, ಆಕಾಶ ಮತ್ತು ಭೂಮಿಯಲ್ಲೂ ಸಾವಿರಾರು ಕೋಟಿ ಹಗರಣ ಮಾಡಿದ್ದರು. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಹಗರಣಗಳಿಗೆ ಅವಕಾಶ ನೀಡಿಲ್ಲ. ಸ್ವಚ್ಛ ಮತ್ತು ದಕ್ಷ ಆಡಳಿತ ಕೊಡುತ್ತಿದ್ದಾರೆ ಎಂದು ತಿರುಗೇಟು ನೀಡಿದ ಬೊಮ್ಮಾಯಿ, 12 ಕೋಟಿ ಶೌಚಾಲಯಗಳು ನಿರ್ಮಾಣವಾಗಿವೆ. ಜಲಜೀವನ್ ಮಿಶನ್ ಯೋಜನೆಯಡಿ ದೇಶದಲ್ಲಿ 11 ಕೋಟಿ ಮನೆಗಳಿಗೆ, ಕರ್ನಾಟಕದಲ್ಲಿ 40 ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದೇವೆ.
ಸುಮಾರು 2.5 ಕೋಟಿ ಮನೆ ನಿರ್ಮಾಣ ಆಗಿವೆ. ಮುದ್ರಾ, ಆಯುಷ್ಮಾನ್, ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ದೇಶದ 57 ಲಕ್ಷ ರೈತರಿಗೆ ವರ್ಷಕ್ಕೆ 10 ಸಾವಿರ ರೂ. ನೀಡಿದ್ದೇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬರೀ ದೇಶದಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ಆಗುತ್ತಿದ್ದವು. ಪಾಕಿಸ್ತಾನದ ಸೊಕ್ಕನ್ನು ಅಡಗಿಸಿದ ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ಈ ಕಡೆ ತಿರುಗಿ ನೋಡದಂತೆ ಮಾಡಿದ್ದಾರೆ. ದೇಶದ ಅಖಂಡತೆ, ಏಕತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.