ಬೆಳಗಾವಿ: ಪಾಕಿಸ್ತಾನದವರು ದೇಶದ ಗಡಿಯಲ್ಲಿ ಗಲಾಟೆ ಮಾಡಿದಂತೆ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಗಡಿಯಲ್ಲಿ ಗಲಾಟೆ ಮಾಡುತ್ತಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮಹಾರಾಷ್ಟ್ರ ಸಿಎಂಗೆ ತಿರುಗೇಟು ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಬೆಳಗಾವಿ ಸೇರಿದಂತೆ ರಾಜ್ಯದ ಗಡಿಭಾಗಗಳನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆಗೆ ಅದೇ ಧಾಟಿಯಲ್ಲಿ ಕರವೇ ಅಧ್ಯಕ್ಷರು ಉತ್ತರ ನೀಡಿದ್ದಾರೆ.
ಬೆಳಗಾವಿಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ನಾರಾಯಣಗೌಡ, ಪಾಕಿಸ್ತಾನದವರಿಗಿಂತ ಶಿವಸೇನೆಯವರೇನೂ ಭಿನ್ನ ಅಲ್ಲ. ಹಾಗೆ ಹೋಲಿಕೆ ಮಾಡಲು ಹೊರಟರೆ ಅದು ಬಹುದೊಡ್ಡ ದುರಂತ ಅನಿಸುತ್ತದೆ. ಗಡಿಯಲ್ಲಿ ಮರಾಠಿಗರು- ಕನ್ನಡಿಗರು ಸೋದರರಂತೆ ಬದುಕುತ್ತಿದ್ದಾರೆ. ಇಲ್ಲಿ ವಿಷಬೀಜ ಬಿತ್ತುವುದನ್ನು ಬಿಟ್ಟು ಸಿಎಂ ಉದ್ಧವ ಠಾಕ್ರೆ ಅವರ ರಾಜ್ಯವನ್ನು ನೋಡಿಕೊಳ್ಳಲಿ. ಇಲ್ಲಿಯ ಮರಾಠಿಗರು ಚೆನ್ನಾಗಿದ್ದಾರೆ. ನಾವು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ. ನೀವು ಅಲ್ಲಿಯ ಜನರನ್ನು ಚೆನ್ನಾಗಿ ನೋಡಿಕೊಳ್ಳಿ. ಬೆಳಗಾವಿಯನ್ನು ಪಡೆದುಕೊಳ್ಳುತ್ತೇವೆ ಎನ್ನುವುದು ತಿರುಕನ ಕನಸು. ಬಾಳ ಠಾಕ್ರೆ ಅದನ್ನು ಹೇಳಿ ಹೇಳಿ ಹೋದರು. ಈಗ ಉದ್ಧವ ಠಾಕ್ರೆ ಉದ್ಭವಿಸಿದ್ದಾರೆ, ಎಂದು ತಿವಿದರು.
ಉದ್ಧವ ಠಾಕ್ರೆ ತನ್ನ ಮಾತುಗಳಿಂದ ಜನರನ್ನು ಕೆರಳಿಸಬಹುದು. ಆದರೆ, ಬೆಳಗಾವಿಯ ಇಂದಿಂಚು ಜಾಗವನ್ನೂ ಪಡೆಯುವುದು ಸಾಧ್ಯವಿಲ್ಲ. ಗಡಿವಿವಾದ ಮುಗಿದು ಹೋದ ವಿಚಾರ. ಶಿವಸೇನೆ ಗಡಿವಿವಾದವನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹೊರಟಿದೆ. ಅದರ ಸಾಧನೆಯನ್ನು ಮಹಾರಾಷ್ಟ್ರದ ಮುಂದೆ ಹೇಳುವುದನ್ನು ಬಿಟ್ಟು, ಗಡಿವಿಚಾರ ಇಟ್ಟುಕೊಂಡು ಗಡಿಯಲ್ಲಿ ಗೂಂಡಾಗಿರಿ ಮಾಡುವುದು, ಪ್ರಚೋದಿಸುವುದು, ಬಸ್ಗಳಿಗೆ ಕಲ್ಲು ಹೊಡೆಯುವುದು, ಕನ್ನಡ ಧ್ವಜ ಸುಡುವುದು ಇಂತಹ ಮೂರ್ಖತನದ ಕೆಲಸಗಳನ್ನು ಮಾಡುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ನಾರಾಯಣಗೌಡ ಒತ್ತಾಯಿಸಿದರು.
ಇದೇ ವೇಳೆ, ಅವರು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನು ಬೆಳಗಾವಿಗೆ ತರಲು ಎಲ್ಲ ಮಠಾಧೀಶರ ಜೊತೆ ಸೇರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡುವುದರ ಮೂಲಕ ಒತ್ತಾಯ ಮಾಡಲಾಗುವುದು ಎಂದರು. ಅಷ್ಟೇ ಅಲ್ಲ, ಜನವರಿ 17 ರಂದು ನಡೆಯಲಿರುವ ಸಂಪುಟ ವಿಸ್ತರಣೆ ವೇಳೆ ಗಡಿ ವಿಚಾರಕ್ಕೆ ಸಂಬಂಧಪಟ್ಟಂತೆ ಒಬ್ಬ ಸಚಿವರನ್ನು ನೇಮಕ ಮಾಡುವಂತೆ ಕೋರಲಾಗುವುದು ಎಂದು ನಾರಾಯಣಗೌಡ ತಿಳಿಸಿದರು.