ಬೆಳಗಾವಿ: ಸಿದ್ದರಾಮಯ್ಯ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಸಿದ್ದರಾಮಯ್ಯೋತ್ಸವಕ್ಕೆ 75 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಾಗಿದೆ. ಅಷ್ಟೊಂದು ಹಣ ಸಿದ್ದರಾಮಣ್ಣನವರಿಗೆ ಎಲ್ಲಿಂದ ಬಂತು. ಅವರ ಇತಿಹಾಸ ನೋಡಿದರೆ, ಅವರು ಶ್ರೀಮಂತ ಕುಟುಂಬದಿಂದ ಬಂದಿಲ್ಲ. ಆದ್ರೂ ಇಷ್ಟು ಹಣ ಹೇಗೆ ಖರ್ಚು ಮಾಡಿದ್ರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡಲಿ: ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದೆ ಅಂತಾ ಸಿದ್ದರಾಮಯ್ಯ ಹೇಳ್ತಾರೆ. ಇದಕ್ಕೆ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡಬೇಕು. ಕೊರೊನಾ ಲಸಿಕೆಯಲ್ಲಿ ದೇಶ ಕ್ರಾಂತಿ ಮಾಡಿದೆ. ಆದರೆ, ಕಾಂಗ್ರೆಸ್ ಕೊರೊನಾ ಲಸಿಕೆಯಲ್ಲಿ ರಾಜಕೀಯ ಮಾಡಿತ್ತು. ಅಂದು ಸಿದ್ದರಾಮಣ್ಣ ಲಸಿಕೆ ಪಡಿಯಬೇಡಿ ಮಕ್ಕಳಾಗಲ್ಲ ಅಂತಾ ಹೇಳಿದ್ರು. ಆದರೆ, ಅವರೇ ಲಸಿಕೆ ಪಡೆದುಕೊಂಡಿದ್ದಾರೆ. ರಾತ್ರಿ ಹೊತ್ತಿನಲ್ಲಿ ರಾಹುಲ್ ಗಾಂಧಿ ಲಸಿಕೆ ಪಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ಉಗ್ರ ಚಟುವಟಿಕೆ ಹಾಗೂ ಅಶಾಂತಿ ನಿರ್ಮಾಣ ಮಾಡುವ ಸಂಘಟನೆ ಬ್ಯಾನ್ ಆಗಿವೆ. ಇಂತಹ ಸಂಘಟನೆಗಳು ಬ್ಯಾನ್ ಆಗಿರುವುದು ಸಂತೋಷದ ವಿಷಯವಾಗಿದೆ. ಧಾರ್ಮಿಕ ಸಂಘಟನೆಗಳ ಹೆಸರಿನಲ್ಲಿ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿದ್ದವು. ಹತ್ಯೆಗಳನ್ನ ಮಾಡುವುದು, ವಿದೇಶದಿಂದ ಹಣ ತಂದು, ಅದನ್ನು ಇಲ್ಲಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿತ್ತು ಎಂದು ಹೇಳಿದರು.
ತನಿಖೆ ಮಾಡಿಯೇ ಈ ನಿರ್ಧಾರ: ಪ್ರಧಾನಿಯವರ ಹತ್ಯೆಗೆ ಯತ್ನ ಮಾಡುವುದು ಸಂಘಟನೆಗಳ ಉದ್ದೇಶ ಆಗಿತ್ತು. ಯಾರೇ ರಾಷ್ಟ್ರ ದ್ರೋಹ ಮಾಡಿದ್ರೂ ಸಹ ಅದಕ್ಕೆ ಜಾತಿ, ಧರ್ಮದ ಕಟ್ಟಳೆಗಳಿಲ್ಲ ಕ್ರಮಕೈಗೊಳ್ಳುತ್ತೇವೆ. ಕಳೆದ 8 ವರ್ಷಗಳ ಅಧ್ಯಯನ ಮಾಡಿ, ಈ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಎಲ್ಲ ರಾಜ್ಯಗಳಲ್ಲೂ ತನಿಖೆ ಮಾಡಿಯೇ ನಿರ್ಧಾರ ಮಾಡಿದೆ ಎಂದರು.