ಚಿಕ್ಕೋಡಿ (ಬೆಳಗಾವಿ): ಮೂಲ ಸೌಕರ್ಯ ಇಲ್ಲದೇ ಇರುವುದರಿಂದ 15ನೇಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನಾಗನೂರು ಪಿಎ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ನಾಗನೂರ ಪಿಎ ಗ್ರಾಮ ಕಂಟೇಕರ್ ತೋಟದ ನಿವಾಸಿಗಳು ಮತದಾನ ಬಹಿಷ್ಕರಿಸಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಾಗನೂರು ಪಿಎ ಗ್ರಾಮದಿಂದ ಕಂಟೇಕರ್ ತೋಟಕ್ಕೆ ಬರುವ ವಸತಿ ಪ್ರದೇಶಕ್ಕೆ ದಶಕಗಳಿಂದ ರಸ್ತೆ ಇಲ್ಲದೇ ಇರುವುದರಿಂದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಹಲವಾರು ಬಾರಿ ಸ್ಥಳೀಯ ಶಾಸಕ ಶ್ರೀಮಂತ ಪಾಟೀಲ್ ಹಿಡಿದು ಮಾಜಿ ಶಾಸಕ ರಾಜು ಕಾಗೆ ಹಾಗೂ ತಹಶೀಲ್ದಾರ್, ಎಸಿ ಅವರಿಗೂ ಮನವಿ ಪತ್ರ ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಇದರಿಂದ ನಾವು ಬೇಸತ್ತು ಚುನಾವಣೆಯನ್ನೇ ಬಹಿಷ್ಕಾರ ಹಾಕಿದ್ದೇವೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಗ್ರಾಮಸ್ಥರಾದ ಮುರಗೇಪ್ಪ ಕಂಟೇಕರ್, ಮಹಾದೇವ ಕಂಟೇಕರ್, ಸಂಗೀತಾ ವಿನಾಯಕ ಕಂಟೇಕರ್ ಮಾತನಾಡಿ, ನಮ್ಮ ಮನೆಗಳಿಗೆ ಹಾಗೂ ನಮ್ಮ ತೋಟಕ್ಕೆ ಹೋಗಲು ರಸ್ತೆ ಸಂಪರ್ಕ ಇಲ್ಲ, ಕುಡಿಯುವುದಕ್ಕೆ ನೀರು ಈಲ್ಲ, ಜನಪ್ರತಿನಿಧಿಗಳಿಗೆ ಸ್ಥಳೀಯ ಅಧಿಕಾರಿಗಳಿಗೆ ಹೇಳಿದರೂ ಯಾರು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ, ನಮಗೆ ಏನು ಮಾಡ್ಬೇಕು ಎಂದು ದಿಕ್ಕು ತೋರದಂತಾಗಿದೆ.
ಸ್ಥಳೀಯ ಜನಪ್ರತಿನಿಧಿಗಳಾದ ಶ್ರೀಮಂತ ಪಾಟೀಲ್ ಅವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಏನು ಪ್ರಯೋಜನವಾಗುತ್ತಿಲ್ಲ ಇದರಿಂದ ನಾವು ಬೇಸತ್ತು ನಮಗೆ ಆಗದ ಸರ್ಕಾರ ಬೇಡ ಎಂದು ಈ ಬಾರಿ ಚುನಾವಣೆ ಬಹಿಷ್ಕಾರ ಮಾಡಿದ್ದೇವೆ. ನಮ್ಮ ತೋಟದ ವಸತಿಯಲ್ಲಿ 200ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದೇವೆ, ನೂರಕ್ಕೂ ಹೆಚ್ಚು ಮತ ಹೊಂದಿರುವ ಕಂಟೆಕರ ತೋಟದ ವಸತಿ ಜನರು ಸಂಪೂರ್ಣವಾಗಿ ಈ ಬಾರಿ ಮತದಾನವನ್ನು ಬಹಿಷ್ಕಾರ ಮಾಡುತ್ತಿದ್ದೇವೆ.