ಚಿಕ್ಕೋಡಿ (ಬೆಳಗಾವಿ): ಸಂಘ ಪರಿವಾರದಲ್ಲಿ ನನಗೆ ಸಿಗುತ್ತಿರುವ ಆಶೀರ್ವಾದವನ್ನು ಕೆಲ ವೈರಿ ಕುತಂತ್ರಿಗಳಿಗೆ ನೋಡಲು ಆಗುತ್ತಿಲ್ಲ. ಅದಕ್ಕಾಗಿ ರಮೇಶ ಜಾರಕಿಹೊಳಿ ಬಿಜೆಪಿ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ ನಾನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ, ನನ್ನ ರಾಜಕೀಯ ಜೀವನ ಇರುವವರೆಗೆ ನಾನು ಬಿಜೆಪಿ ಪಕ್ಷದಲ್ಲಿ ಇರುತ್ತೇನೆ. ನನ್ನ ರಾಜಕೀಯ ಜೀವನ ಬಿಜೆಪಿ ಪಕ್ಷದಲ್ಲೇ ಅಂತ್ಯವಾಗುತ್ತೆ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿಯಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಯಡಿಯೂರಪ್ಪ ಬದಲಾವಣೆ ಆಗುತ್ತಾರೆ ಎಂಬುವುದು ಸತ್ಯಕ್ಕೆ ದೂರ. ದೇಶದಲ್ಲಿಯೇ ದಕ್ಷತೆಯಿಂದ ಯುವಕರಂತೆ ಯಡಿಯೂರಪ್ಪನವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನ ಬದಲಾವಣೆ ಮಾಡುವ ಪ್ರಮೇಯವಿಲ್ಲ ಎಂದರು.