ಕರ್ನಾಟಕ

karnataka

ETV Bharat / state

ಬೆಳಗಾವಿ: ಗಣೇಶೋತ್ಸವ ಮೆರವಣಿಗೆಗೆ ಈದ್ ಮಿಲಾದ್ ಮುಂದೂಡಿದ ಮುಸ್ಲಿಮರು - ಪೊಲೀಸ್ ಸರ್ಪಗಾವಲು

ಬೆಳಗಾವಿಯಲ್ಲಿ ಮುಸ್ಲಿಮರು ಗಣೇಶೋತ್ಸವ ಪ್ರಯುಕ್ತ ಈದ್​ ಮಿಲಾದ್​ ಹಬ್ಬವನ್ನು ಮುಂದೂಡಿದ್ದು, ಅಕ್ಟೋಬರ್​ 1 ರಂದು ಆಚರಿಸಲು ನಿರ್ಧರಿಸಿದ್ದಾರೆ.

Muslims postpone Eid Milad for Ganesha procession
ಗಣೇಶ ವಿಸರ್ಜನೆ ಮೆರವಣಿಗೆಗೆ ಈದ್ ಮಿಲಾದ್ ಮುಂದೂಡಿದ ಮುಸ್ಲಿಮರು

By ETV Bharat Karnataka Team

Published : Sep 18, 2023, 9:01 AM IST

Updated : Sep 18, 2023, 1:04 PM IST

ಬೆಳಗಾವಿ: ಗಣೇಶೋತ್ಸವ ಮೆರವಣಿಗೆಗೆ ಈದ್ ಮಿಲಾದ್ ಮುಂದೂಡಿದ ಮುಸ್ಲಿಮರು

ಬೆಳಗಾವಿ: ಗಡಿ, ಭಾಷೆಯ ಹೆಸರಿನಲ್ಲಿ ನಡೆಯುವ ಹಲವು ವಿವಾದಗಳ ಮಧ್ಯೆ ಬೆಳಗಾವಿ ಹಬ್ಬಗಳ ವಿಚಾರದಲ್ಲಿ ಸೌಹಾರ್ದತೆ ಮೆರೆಯುತ್ತಾ ಬಂದಿದೆ. ಇದಕ್ಕೆ ಹೊಸ ಉದಾಹರಣೆಯೆಂಬಂತೆ, ಈ ಬಾರಿ ಎಲ್ಲ ಧರ್ಮ, ಭಾಷೆಯವರು ಒಂದಾಗಿ ಗಣೇಶೋತ್ಸವ ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಗಣೇಶ ನಿಮಜ್ಜನೆ ಮೆರವಣಿಗೆಗೆ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಮುಂದೂಡಿದ್ದಾರೆ.

119 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ವೈಭವದ ಗಣೇಶೋತ್ಸವಕ್ಕೆ ಕುಂದಾನಗರಿ ಖ್ಯಾತಿಯ ಬೆಳಗಾವಿ ಸಜ್ಜಾಗಿದೆ. ವಿಘ್ನ ನಿವಾರಕನನ್ನು ಶ್ರದ್ಧಾ-ಭಕ್ತಿಯಿಂದ ಬರಮಾಡಿಕೊಂಡು, ಸಂತಸದಿಂದ ಚೌತಿ ಆಚರಿಸಲು ಜನತೆ ಉತ್ಸುಕರಾಗಿದ್ದಾರೆ. ಕಳೆದೆರಡು ವರ್ಷ ಚೌತಿ ಮೇಲೆ ಕೋವಿಡ್‌–19 ನಿರ್ಬಂಧಗಳಿದ್ದವು. ಇದೀಗ ಕೊರೊನಾ ಉಪಟಳವಿಲ್ಲ. ಹೀಗಾಗಿ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ.

ಸೆಪ್ಟೆಂಬರ್ 19ರಂದು ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಉತ್ಸವ ಮಂಡಳಿಗಳು ನಿರ್ಧರಿಸಿವೆ. 10 ದಿನಗಳ‌ ಕಾಲ ಗಣೇಶನ ಆರಾಧನೆ ಜೋರಾಗಿರುತ್ತದೆ. 10ನೇ ದಿನ ಸಾರ್ವಜನಿಕ ಗಣೇಶ ಮೂರ್ತಿಗಳ ನಿಮಜ್ಜನಾ ಮೆರವಣಿಗೆ ಅದ್ಧೂರಿಯಾಗಿ ನೆರವೇರಲಿದೆ. ಈ ದೃಶ್ಯವೈಭವ ಕಣ್ತುಂಬಿಕೊಳ್ಳಲು ಹಲವೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ.

ಈ ಬಾರಿ ಸೆ.28ರಂದು ಗಣೇಶ ನಿಮಜ್ಜನಾ ಮೆರವಣಿಗೆ ದಿನವೇ ಈದ್ ಮಿಲಾದ್ ಹಬ್ಬ ಬಂದಿದೆ‌. ಆ ದಿನ ಅವರೂ ಕೂಡಾ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಸುತ್ತಾರೆ‌. ಇಂಥ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಮುಸ್ಲಿಂ ಧರ್ಮಗುರುಗಳು, ಅಂಜುಮನ್-ಏ-ಇಸ್ಲಾಂ ಸಂಸ್ಥೆಯವರು ಸಭೆ ನಡೆಸಿ ತಮ್ಮ ಹಬ್ಬವನ್ನು ಅಕ್ಟೋಬರ್ 1ರಂದು ಆಚರಿಸಲು ನಿರ್ಧರಿಸಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅಂಜುಮನ್-ಏ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಹಾಗು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್, "ಸಿರತ್ ಕಮಿಟಿ, ಅಂಜುಮನ್ ಸಂಸ್ಥೆ, ಎಲ್ಲ ಜಮಾತ್ ಧರ್ಮಗುರುಗಳು ಸೇರಿಕೊಂಡು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಉದ್ದೇಶದಿಂದ ಈದ್ ಮಿಲಾದ್ ಮುಂದೂಡಲಾಗಿದೆ. ಗಣೇಶೋತ್ಸವ ಮೆರವಣಿಗೆಗೆ ನಾವೂ ಹೋಗುತ್ತೇವೆ. ನಮ್ಮ ಹಬ್ಬಕ್ಕೆ ಹಿಂದೂ ಸಮಾಜ ಬಾಂಧವರನ್ನೂ ಆಹ್ವಾನಿಸುತ್ತೇವೆ. ಇದರಿಂದ ಸೌಹಾರ್ದಯುತ ವಾತಾವರಣ ನಿರ್ಮಾಣವಾಗುತ್ತದೆ" ಎಂದರು.

ಗಣೇಶ ಮಂಡಳಿ ಮುಖಂಡ ವಿಕಾಸ ಕಲಘಟಗಿ ಮಾತನಾಡಿ, "ಮುಸ್ಲಿಂ ಬಾಂಧವರು ಕೈಗೊಂಡಿರುವುದು ಐತಿಹಾಸಿಕ ನಿರ್ಧಾರ. ಇದು ಇಡೀ ರಾಜ್ಯಕ್ಕೆ ಮಾದರಿ. ಎರಡೂ ಸಮಾಜದವರು ಒಗ್ಗಟ್ಟಾಗಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬವನ್ನು ಯಶಸ್ವಿಗೊಳಿಸುತ್ತೇವೆ" ಎಂದರು.

ಪೊಲೀಸ್ ಆಯುಕ್ತರ ಮಾಹಿತಿ: "ಗಣೇಶೋತ್ಸವದ ವೇಳೆ ಶಾಂತಿ ಪಾಲನೆಗಾಗಿ ಎರಡು ಹಂತದ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಸೆ.18ರಿಂದ 27ರವರೆಗೆ ಮೊದಲ ಹಂತದಲ್ಲಿ 2 ಡಿಸಿಪಿ, 4 ಎಸಿಪಿ, 28 ಇನ್‌ಸ್ಪೆಕ್ಟರ್‌ಗಳು, 50 ಪಿಎಸ್‌ಐಗಳು, 150 ಎಎಸ್‌ಐಗಳು, 1,500 ಪೊಲೀಸರು, 600 ಗೃಹರಕ್ಷಕ ದಳ ಸಿಬ್ಬಂದಿ, 10 ಕೆಎಸ್‌ಆರ್‌ಪಿ ತುಕಡಿ ಹಾಗೂ ಕೊಯಮತ್ತೂರಿನಿಂದ ರ್‍ಯಾಪಿಡ್‌ ಆ್ಯಕ್ಷನ್‌ ಫೋರ್ಸ್ ತಂಡ ಆಗಮಿಸಲಿದೆ. ಸೆ.27ರಿಂದ ಭದ್ರತಾ ವ್ಯವಸ್ಥೆ ಮತ್ತಷ್ಟು ಹೆಚ್ಚಲಿದ್ದು, 27ರಿಂದ ನಿಮಜ್ಜನೆ ಮುಗಿಯವವರೆಗೂ 6 ಎಸ್‍ಪಿ, 20 ಡಿವೈಎಸ್‍ಪಿ, 50 ಪಿಐ, 80ಕ್ಕೂ ಹೆಚ್ಚು ಪಿಎಸ್‍ಐ, 10 ಕೆಎಸ್‍ಆರ್​ಪಿ ತುಕಡಿಗಳು, ಅಲ್ಲದೇ ಹೊರ ಜಿಲ್ಲೆಗಳಿಂದ ಹೆಚ್ಚುವರಿಯಾಗಿ 1000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಆಗಮಿಸಲಿದ್ದಾರೆ. ಮೆರವಣಿಗೆ ಮಾರ್ಗ, ಗಣೇಶೋತ್ಸವ ಮಂಟಪಗಳು, ಸೂಕ್ಷ್ಮ ಪ್ರದೇಶಗಳಲ್ಲಿ 450 ಸಿಸಿ ಕ್ಯಾಮರಾ ಅಳವಡಿಸುತ್ತಿದ್ದೇವೆ. ಮೆರವಣಿಗೆ ದಿನ 6 ಡ್ರೋನ್ ಕ್ಯಾಮರಾ ಬಳಸಲಾಗುವುದು" ಎಂದು ಈಟಿವಿ ಭಾರತಕ್ಕೆ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಮಾಹಿತಿ ನೀಡಿದರು.

ಪಾಲಿಕೆ ಆಯುಕ್ತರ ಪ್ರತಿಕ್ರಿಯೆ:ನಗರದಲ್ಲಿ ಗಣೇಶನ ಮೂರ್ತಿಗಳ ನಿಮಜ್ಜನೆ ನಡೆಯುವ ಕೋಟೆಕೆರೆ, ಕಪಿಲೇಶ್ವರ, ಜಕ್ಕೇರಿ ಹೊಂಡ ಸೇರಿ 8 ಕಡೆಗಳಲ್ಲಿ ಪಾಲಿಕೆ ಸಿಬ್ಬಂದಿ, ಸಂಘ-ಸಂಸ್ಥೆಗಳ ಸ್ವಯಂಸೇವಕರು ಸ್ವಚ್ಛತಾ ಕಾರ್ಯ, ಬಣ್ಣ ಬಳಿಯುವ ಕೆಲಸ ಕೈಗೊಂಡಿದ್ದಾರೆ. ವಿದ್ಯುತ್, ಕ್ರೇನ್ ವ್ಯವಸ್ಥೆಗಳನ್ನು ಸಮರ್ಪಕವಾಗಿ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೆರವಣಿಗೆ ಮಾರ್ಗದ ರಸ್ತೆಗಳಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚಲಾಗಿದೆ. ಮೊಬೈಲ್ ವಾಹನಗಳು, ಮೊಬೈಲ್ ಟಾಯ್ಲೆಟ್ ವ್ಯವಸ್ಥೆಯಾಗಿದೆ. ಬಹುತೇಕ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ" ಎಂದು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ತಿಳಿಸಿದ್ದಾರೆ.

ಇದನ್ನೂ ಓದಿ:ಅದ್ಧೂರಿ ಗಣೇಶ ಉತ್ಸವಕ್ಕೆ ಸಿದ್ಧತೆ ಜೋರು.. ಈ ಸಲ ಕಾಂತಾರ ಗಣೇಶನಿಗೆ ಭಾರಿ ಡಿಮ್ಯಾಂಡ್​..

Last Updated : Sep 18, 2023, 1:04 PM IST

ABOUT THE AUTHOR

...view details