ಬೆಳಗಾವಿ: ಬೆಳಗಾವಿಯ ಬಾಪಟ್ ಗಲ್ಲಿ ಶಾಹಿ ಮಸೀದಿ ವಿವಾದ ಸಂಬಂಧ ಬಿಜೆಪಿ ಶಾಸಕ ಅಭಯ್ ಪಾಟೀಲ್ ಡಿಸಿ ಭೇಟಿಯ ಬೆನ್ನಲ್ಲೇ ಮುಸ್ಲಿಂ ಸಮುದಾಯದ ನಾಯಕರು ಪ್ರಾದೇಶಿಕ ಆಯುಕ್ತರನ್ನು ಭೇಟಿಯಾದರು. ಮಾಜಿ ಶಾಸಕ ಫಿರೋಜ್ ಸೇಠ್, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ರಾಜು ಸೇಠ್ ಹಾಗು ಸಮುದಾಯದ ಧರ್ಮಗುರುಗಳು ನಿಯೋಗದಲ್ಲಿದ್ದರು.
ರಾಜಕೀಯ ಲಾಭಕ್ಕಾಗಿ ಎರಡು ಸಮುದಾಯ ನಡುವೆ ಬೆಂಕಿ ಹಚ್ಚುವ ಯತ್ನ ನಡೆದಿದೆ ಎಂದು ಆರೋಪಿರುವ ನಿಯೋಗ, ಬಾಪಟ್ ಗಲ್ಲಿಯಲ್ಲಿ ಮಸೀದಿ ಇರುವ ಜಾಗದ ದಾಖಲೆಪತ್ರವನ್ನು ಸಲ್ಲಿಸಿದರು. 1991ರ 'ಪೂಜಾ ಸ್ಥಳ ಕಾಯ್ದೆ'ಯಂತೆ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ಗೆ ನಿಯೋಗ ಮನವಿ ಮಾಡಿತು.
ಇದನ್ನೂ ಓದಿ:ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯ; ಕೊಡಗಿನಲ್ಲಿ ಅಣಕು ಪ್ರದರ್ಶನ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಫಿರೋಜ್ ಸೇಠ್, 'ಏನು ವಸ್ತುಸ್ಥಿತಿ ಇದೆಯೋ ಅದರ ಬಗ್ಗೆ ಪ್ರಾದೇಶಿಕ ಆಯುಕ್ತರ ಜೊತೆ ಮಾತನಾಡಿದ್ದೇನೆ. ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು 1991ರ 'ಪೂಜಾ ಸ್ಥಳಗಳ ಕಾಯ್ದೆ'ಯನ್ನು ಓದಬೇಕು. ನಾವು ದ್ವೇಷಕ್ಕೆ ಪ್ರೀತಿಯಿಂದಲೇ ಉತ್ತರ ನೀಡುತ್ತೇವೆ. ನನಗೆ ನನ್ನ ದೇಶ, ರಾಷ್ಟ್ರ ಮುಖ್ಯ. ರಾಷ್ಟ್ರದಲ್ಲಿ ಶಾಂತಿ ಇದ್ದರೆ ಎಲ್ಲವೂ ಸಾಧ್ಯ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಈ ರೀತಿಯ ಮಾತುಗಳನ್ನು ಆಡಬಾರದು. ಗಾಳಿಮಾತು ಆಡಿ ಜನರನ್ನು ಪ್ರಚೋದಿಸುವುದು ಶೋಭೆ ತರಲ್ಲ. ಇಂತಹ ಕೆಲಸ ಮಾಡಬೇಡಿ' ಎಂದರು.
ಬೆಳಗಾವಿಯ ಬಾಪಟ್‌ಗಲ್ಲಿಯ ಶಾಹಿ ಮಸೀದಿ ಈ ಹಿಂದೆ ಮಂದಿರವಾಗಿತ್ತು. ದೇಗುಲ ದ್ವಂಸ ಮಾಡಿ ಮಸೀದಿ ನಿರ್ಮಿಸಲಾಗಿದೆ. ಹೀಗಾಗಿ, ಮಸೀದಿಯ ಸರ್ವೇ ಮಾಡಬೇಕು ಎಂದು ಶಾಸಕ ಅಭಯ್ ಪಾಟೀಲ ಇತ್ತೀಚೆಗೆ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದರು.