ಬೆಳಗಾವಿ: ಹೊಸ ಗಣಿ ನೀತಿ ಜಾರಿಗೆ ತಂದು ಉದ್ಯಮಸ್ನೇಹಿ ರಾಜ್ಯ ನಿರ್ಮಾಣ ಮಾಡಲಾಗುವುದು. ನಮ್ಮ ಹೊಸ ಗಣಿ ಕಾನೂನನ್ನು ಬೇರೆ ರಾಜ್ಯಗಳು ಅನುಕರಣೆ ಮಾಡುವಂತೆ ಮಾಡಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನೂತನ ಕಚೇರಿ ಉದ್ಘಾಟಿಸಿದ ಸಚಿವ ಮುರುಗೇಶ್ ನಿರಾಣಿ ನಗರದ ಕುಮಾರಸ್ವಾಮಿ ಲೇಔಟ್ ನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನೂತನ ಕಚೇರಿ ಮತ್ತು ಖನಿಜ ಭವನ ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಹೆಚ್ಚಿನ ಖನಿಜ ಸಂಪನ್ಮೂಲ ಲಭ್ಯವಿದೆ. ಹೊಸ ಗಣಿ ನೀತಿ ಜಾರಿಗೆ ತರುವ ಮೂಲಕ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಮರಳು ಲಭ್ಯವಾಗುವಂತೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಜತೆ ಈಗಾಗಲೇ ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿ ಅವರೂ ಈ ಬಗ್ಗೆ ಬಜೆಟ್‌ನಲ್ಲಿ ತಿಳಿಸಿದ್ದಾರೆ. ಮರಳು ಪೂರೈಕೆಯಲ್ಲಿ 10 ಲಕ್ಷ ರೂ. ಒಳಗೆ ಮನೆ ನಿರ್ಮಿಸಿಕೊಳ್ಳುವ ಎಲ್ಲರಿಗೂ ಅತ್ಯಂತ ಕಡಿಮೆ ದರದಲ್ಲಿ ಸುಲಭವಾಗಿ ಮರಳು ಸಿಗುವಂತೆ ಮಾಡಲಾಗುವುದು ಎಂದರು.
10 ಲಕ್ಷ ರೂ. ಗೂ ಹೆಚ್ಚು ವೆಚ್ಚದಲ್ಲಿ ಕಟ್ಟಡ ನಿರ್ಮಿಸಿಕೊಳ್ಳುವವರು ಕಟ್ಟಡ ಪರವಾನಿಗೆ ತೆಗೆದುಕೊಳ್ಳುವ ವೇಳೆ ಎಷ್ಟು ಮರಳು ಉಪಯೋಗ ಆಗುತ್ತದೆ ಎಂಬುದನ್ನು ನೋಡಿಕೊಂಡು ಸರ್ಕಾರ ತೆರಿಗೆ ನೀತಿ ನಿಗದಿ ಪಡಿಸುತ್ತದೆ. ಒಂದು ಟನ್‌ಗೆ 100 ರೂ. ಅಥವಾ 200 ರೂ. ತೆರಿಗೆ ವಿಧಿಸುವ ಬಗ್ಗೆ ಚರ್ಚಿಸಲಾಗುತ್ತಿದೆ. ಅದೇ ರೀತಿ ಸರ್ಕಾರಿ ಟೆಂಡರ್ ಮೂಲಕ ನಡೆಯುವ ಕಾಮಗಾರಿಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮರಳು ಉಪಯೋಗ ಆಗುತ್ತದೆ ಎಂಬುದನ್ನು ನೋಡಿಕೊಂಡು ಗುತ್ತಿಗೆದಾರರಿಗೆ ತೆರಿಗೆ ನಿಗದಿಪಡಿಸಲಾಗುತ್ತಿದೆ. ಸಂಬಂಧಿಸಿದ ಮಹಾನಗರ ಪಾಲಿಕೆ, ಗ್ರಾಮ ಪಂಚಾಯಿತಿ ಸೇರಿ ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹಿಸಲಿವೆ ಎಂದು ತಿಳಿಸಿದರು.
ಓದಿ:ಕಿಷ್ಕಿಂದಾ ಭವ್ಯ ಹನುಮ ಮಂದಿರ ನಿರ್ಮಾಣಕ್ಕಾಗಿ ದೇಶದಲ್ಲಿ 12 ವರ್ಷಗಳ ಕಾಲ ರಥಯಾತ್ರೆ..
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜತೆಗೆ ಅರಣ್ಯ, ಸಾರಿಗೆ, ಪೊಲೀಸ್ ಇಲಾಖೆ ಸೇರಿ ಇನ್ನಿತರ ಇಲಾಖೆಗಳನ್ನು ಸೇರಿಸಿ ಗಣಿ ನಡೆಸುವವರಿಗೆ ಯಾವುದೇ ರೀತಿ ತೊಂದರೆ ಆಗದಂತೆ ‘ಏಕ ಗವಾಕ್ಷಿ ಯೋಜನೆ’ ಜಾರಿಗೆ ತರಲಾಗುವುದು. ಇದರಿಂದ ಒಂದೇ ವೇದಿಕೆಯಲ್ಲಿ ಪರವಾನಗಿ ಸಿಗಲಿದೆ. ಅದೇ ರೀತಿ ಮೈನ್ಸ್ ಅದಾಲತ್‌ಗಳನ್ನು ಮೈಸೂರು, ಕಲಬುರ್ಗಿ, ಬೆಳಗಾವಿ, ಬೆಂಗಳೂರು, ಮಂಗಳೂರಿನಲ್ಲಿ ಆಯೋಜಿಸಲಿದ್ದೇವೆ ಎಂದು ತಿಳಿಸಿದರು.