ಬೆಳಗಾವಿ: ಹಣ ನೀಡದಿದ್ದಲ್ಲಿ ಕೊಲೆ ಮಾಡುವುದಾಗಿ ಶ್ರೀಮಂತರು ಹಾಗೂ ವ್ಯಾಪಾರಿಗಳಿಗೆ ಬೆದರಿಕೆ ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳಗಾವಿ ಖಡೇಬಜಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶ್ರೀಮಂತರು-ವ್ಯಾಪಾರಿಗಳಿಗೆ ಹಣಕ್ಕಾಗಿ ಕೊಲೆ ಬೆದರಿಕೆ: ಇಬ್ಬರು ಆರೋಪಿಗಳ ಬಂಧನ
ಶ್ರೀಮಂತರು ಹಾಗೂ ವ್ಯಾಪಾರಿಗಳಿಗೆ ಬೆದರಿಕೆ ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳಗಾವಿ ಖಡೇಬಜಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದ ವಿಶಾಲಸಿಂಗ್ ಚವ್ಹಾಣ ಹಾಗೂ ಬೆಳಗಾವಿಯ ಶಾಸ್ತ್ರಿ ನಗರದ ಪ್ರಥಮೇಶ ಗಣಿಕೊಪ್ಪ ಬಂಧಿತ ಆರೋಪಿಗಳು. ಇವರು ನಗರದಲ್ಲಿನ ಬಿಲ್ಡರ್ಗಳಿಗೆ, ದೊಡ್ಡ ವ್ಯಾಪಾರಿಗಳಿಗೆ ಫೋನ್ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದರಂತೆ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಆರೋಪಿಗಳಿಗಾಗಿ ಬಲೆ ಬೀಸಿದ್ದ ಖಡೇಬಜಾರ್ ಪೊಲೀಸರು, ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಾರು, ಮಾರಕಾಸ್ತ್ರಗಳು, ಒಂದು ಬೈಕ್ ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಆರೋಪಿಗಳು ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆ ಸೇರಿದಂತೆ ನಗರದ ಹಲವಾರು ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಈ ಕುರಿತು ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.