ಬೆಳಗಾವಿ:ಇಲ್ಲಿನ ಸ್ಟೀಲ್ ಕಾರ್ಖಾನೆಯೊಂದರ ಕಾರ್ಮಿಕನ ಹತ್ಯೆಗೈದ ಮೂವರು ಹಂತಕರನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಸೋಮನಟ್ಟಿ ಗ್ರಾಮದ ಸಾಗರ ಪೂಜೇರಿ ಎಂಬಾತನ ಕೊಲೆಗೈಯಾಗಿತ್ತು. ಕೊಲೆ ಪ್ರಕರಣ ಸಂಬಂಧ ಬೈಲಹೊಂಗಲ ತಾಲೂಕಿನ ಕೊಳ್ಯಾನಟ್ಟಿ ಗ್ರಾಮದ ಬಾಳಪ್ಪ ದಿನ್ನಿ, ಬಸವರಾಜ ಉಪ್ಪಾರ, ಸಂಪಗಾವಿಯ ಮಂಜುನಾಥ ಬೀಡಿ ಎಂಬುವರನ್ನು ಬಂಧಿಸಲಾಗಿದೆ.
ಹತ್ಯೆಗೆ ಕಾರಣವಾಯಿತಾ ಅನೈತಿಕ ಸಂಬಂಧ?
ಮೃತಪಟ್ಟ ಸೋಮನಟ್ಟಿ ಗ್ರಾಮದ ಸಾಗರ ಪೂಜೇರಿ ಎಂಬಾತ ನೀಲಮ್ಮ ಎಂಬಾಕೆಯ ಜೊತೆಗೆ ವಿವಾಹವಾಗಿದ್ದನು. ಕೆಲ ವರ್ಷಗಳ ಬಳಿಕ ಸಾಗರ ಪತ್ನಿ ನೀಲಮ್ಮನ ತಂಗಿ ಜೊತೆಗೆ ಆತ ಅನೈತಿಕ ಸಂಬಂಧ ಹೊಂದಿದ್ದನು. ಈ ವಿಚಾರ ಪತ್ನಿಗೆ ಗೊತ್ತಾಗಿದ್ದು, ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಳು.
ಬುದ್ಧಿವಾದ ಹೇಳಿ ಸರಿಪಡಿಸಬೇಕಿದ್ದ ನೀಲಮ್ಮನ ಕುಟುಂಬಸ್ಥರು ಸಾಗರನನ್ನು ಕೊಲೆಗೈದಿದ್ದಾರೆ. ಎರಡ್ಮೂರು ದಿನಗಳ ಹಿಂದೆ ಕಾರಿನಲ್ಲಿ ಬೆಳಗಾವಿಗೆ ಬಂದಿರುವ ಆರೋಪಿಗಳು ಸಾಗರನನ್ನು ಭೇಟಿಯಾಗಿದ್ದಾರೆ. ಅಲ್ಲದೇ ಉಳವಿಗೆ ಹೋಗಿ ಬರೋಣ ಎಂದು ಹೇಳಿ ಕಾರಿನಲ್ಲಿ ಕೂಡ್ರಿಸಿಕೊಂಡಿದ್ದಾರೆ.
ಉಳವಿ ಬಳಿಯ ಕಾಡಿನಲ್ಲಿ ಸಾಗರನನ್ನು ಕೊಲೆಗೈದಿರುವ ಆರೋಪಿಗಳು ಶವ ಅಲ್ಲೇ ಬಿಸಾಕಿ ಬಂದಿದ್ದಾರೆ. ಸಾಗರ ಮನೆಗೆ ಬರದನ್ನು ಗಮನಿಸಿದ ತಂದೆ ಗಂಗಪ್ಪ ಮಾರ್ಕೆಟ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮಾರ್ಕೆಟ್ ವಿಭಾಗದ ಎಸಿಪಿ ಎಸ್.ಆರ್. ಕಟ್ಟೀಮನಿ ಹಾಗೂ ಮಾರ್ಕೆಟ್ ಠಾಣೆ ಪಿಐ ಸಂಗಮೇಶ ಶಿವಯೋಗಿ ನೇತೃತ್ವದ ತಂಡ ಪ್ರಕರಣ ಪತ್ತೆ ಹಚ್ಚಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.