ಬೆಳಗಾವಿ : ಆಸ್ತಿ ವಿಚಾರವಾಗಿ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ತಿಗಡಿ ಗ್ರಾಮದ ನಿವಾಸಿ ಸುರೇಶ್ ಖಣಗಾಂವಿ ಮೃತಪಟ್ಟಿದ್ದು, ಸದಾ ಖಣಗಾಂವಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಂಕರ್ ಖಣಗಾಂವಿ ಕೊಲೆಗೈದ ಆರೋಪಿ ಎಂದು ತಿಳಿದುಬಂದಿದೆ.
ಹತ್ಯೆಗೀಡಾದ ಸುರೇಶ್ ಮಾಜಿ ಸೈನಿಕನಾಗಿದ್ದು, ಸದ್ಯ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೊತೆಗೆ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಆಸ್ತಿ ವಿಚಾರವಾಗಿ ಆರೋಪಿ ಶಂಕರ್ ಖಣಗಾಂವಿ ಹಾಗೂ ಹತ್ಯೆಗೀಡಾದ ಸುರೇಶ್ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಇಬ್ಬರ ಗಲಾಟೆ ವಿಕೋಪಕ್ಕೆ ತಿರುಗಿದೆ. ಈ ವೇಳೆ ಚಿಕ್ಕಪ್ಪ ಶಂಕರ್ ಸುರೇಶ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಸುರೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದಾ ಖಣಗಾಂವಿ ಎಂಬವರು ಗಂಭೀರ ಗಾಯಗೊಂಡಿದ್ದು, ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಬೈಲಹೊಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾವೇರಿಯಲ್ಲಿ ಯುವಕ ಆತ್ಮಹತ್ಯೆ :ಅಣ್ಣ ಪ್ರೀತಿಸಿದ ಹುಡುಗಿ ಕಡೆಯವರ ಕಿರುಕುಳದಿಂದ ಬೇಸತ್ತು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡದ ಯುವಕ ಸುರೇಶ ನಾಯ್ಕ ಮೃತನು ಎಂದು ಗುರುತಿಸಲಾಗಿದೆ.
ಸುರೇಶ್ ನಾಯ್ಕ ಸಹೋದರನಾದ ಮಂಜು ನಾಯ್ಕ ಹಾವೇರಿಯ ಯುವತಿಯನ್ನು ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಈ ಯುವತಿ ಕೂಡ ಮಂಜುನನ್ನು ಪ್ರೀತಿಸುತ್ತಿದ್ದಳಂತೆ. ಅಲ್ಲದೆ ಈ ಯುವತಿಯು, ತನಗೆ ಸರ್ಕಾರಿ ನೌಕರಿ ಸಿಗಲಿದೆ. ಹಣ ಬೇಕು ಎಂದು ತನ್ನ ಪ್ರಿಯಕರ ಮಂಜು ಬಳಿ ಕೇಳಿದ್ದಳು. ಹೀಗಾಗಿ ಮಂಜು ಆಕೆಗೆ 4 ಲಕ್ಷ ರೂಪಾಯಿ ಜೊತೆಗೆ ಒಡವೆಗಳನ್ನು ನೀಡಿದ್ದಾನೆ ಎಂದು ಹೇಳಲಾಗಿದೆ. ಆದರೆ ಯುವತಿಯು ತನ್ನ 8 ವರ್ಷದ ಪ್ರೀತಿ ಮರೆತು ಮೇ 30 ರಂದು ಬೇರೆ ಯುವಕನೊಂದಿಗೆ ಮದುವೆಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಇದರಿಂದ ಕೆರಳಿದ ಮಂಜು ನಾಯ್ಕ ಮೇ 29 ರಂದು ತನ್ನ ಪ್ರಿಯತಮೆಯ ಸಹೋದರನಿಗೆ ಇಬ್ಬರ ಖಾಸಗಿ ವಿಡಿಯೋಗಳನ್ನು ತೋರಿಸಿದ್ದಾನೆ. ಅಲ್ಲದೆ ಇದನ್ನು ಇಟ್ಟುಕೊಂಡು ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಕೆರಳಿದ ಯುವತಿಯ ಕುಟುಂಬ ಮಂಜು ನಾಯ್ಕ್ ವಿರುದ್ಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ, ಮೇ 30 ರಂದು ಬೇರೆ ಯುವಕನೊಂದಿಗೆ ಯುವತಿಯ ಮದುವೆಯನ್ನು ನಡೆಸಿದ್ದರು.
ಅಷ್ಟೇ ಅಲ್ಲದೆ ಯುವತಿ ಕುಟುಂಬಸ್ಥರು ಮಂಜುಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಂಜು ಬದಲು ಆತನ ಸಹೋದರ ಸುರೇಶ್ ನಾಯ್ಕ್ ಸಿಕ್ಕಿದ್ದು, ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಹೇಳಲಾಗಿದೆ. ಇದರಿಂದ ಸುರೇಶ್ ಜೂನ್ 2ರಂದು ಆತ್ಮಹತ್ಯೆಗೆ ಯತ್ನಿಸಿದ್ದ. ಕುಟುಂಬಸ್ಥರು ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ :ಸಬ್ ಇನ್ಸ್ಪೆಕ್ಟರ್ ಪತ್ನಿ ಅನುಮಾನಾಸ್ಪದ ಸಾವು : ಆತ್ಮಹತ್ಯೆ ಶಂಕೆ