ಬೆಳಗಾವಿ:ಪದೇಪದೇ ಗಡಿವಿವಾದ ಕೆಣಕುತ್ತಿದ್ದ ಶಿವಸೇನೆಯ ಕಿಡಿಗೇಡಿಗಳು ಈಗ ಹೊಸದೊಂದು ಕ್ಯಾತೆ ತಗೆದಿದ್ದಾರೆ. ಶಿವಸೇನೆಯವರು ಬರೆದಿದ್ದಾರೆ ಎನ್ನಲಾದ ಪತ್ರ ಆಧರಿಸಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕರ್ನಾಟಕದ ಎನ್‌ಡಬ್ಲ್ಯೂಕೆಆರ್‌ಟಿಸಿ ಅಧಿಕಾರಿಗಳಿಗೆ ಇಂಗ್ಲಿಷ್‌ನಲ್ಲಿ ಧಮ್ಕಿ ಪತ್ರವೊಂದನ್ನು ರವಾನಿಸಿದ್ದಾರೆ.
ಶಿವಸೇನೆ ಕ್ಯಾತೆ: ಕರ್ನಾಟಕ ರಾಜ್ಯ ಸಾರಿಗೆ ಅಧಿಕಾರಿಗಳಿಗೆ ಎಂಎಸ್ಆರ್ಟಿಸಿಯಿಂದ ಧಮ್ಕಿ ಪತ್ರ - shivsena latest news updates
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್‌ಗೆ ಬೆಳಗಾವಿ, ವಿಜಯಪುರ, ಅಥಣಿ, ಚಿಕ್ಕೋಡಿ ವಿಭಾಗದಿಂದ ನೂರಾರು ಸಂಖ್ಯೆಯಲ್ಲಿ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸುತ್ತವೆ. ಬಸ್‌ಗಳಲ್ಲಿ ಕರ್ನಾಟಕದ ಪ್ರಯಾಣಿಕರಷ್ಟೇ ಅಲ್ಲ, ಮಹಾರಾಷ್ಟ್ರದ ಪ್ರಯಾಣಿಕರು ಹೆಚ್ಚಾಗಿ ಪ್ರಯಾಣಿಸುತ್ತಾರೆ. ಇದರಿಂದ ಹತಾಶೆಗೆ ಒಳಗಾಗಿರುವ ಶಿವಸೇನೆ ತನ್ನ ಸಾಂಗ್ಲಿ ಜಿಲ್ಲಾಧ್ಯಕ್ಷನ ಮೂಲಕ ಸಾಂಗ್ಲಿ ಎಂಎಸ್‌ಆರ್‌ಟಿಸಿ ಡಿವಿಜನ್ ಕಂಟ್ರೋಲರ್‌ಗೆ ಪತ್ರವೊಂದನ್ನು ರವಾನಿಸಿದೆ.
ಎನ್‌ಡಬ್ಲ್ಯೂಕೆಆರ್‌ಟಿಸಿ ಡಿಸಿಗಳಿಗೆ MSRTC ಬರೆದ ಪತ್ರದಲ್ಲೇನಿದೆ:
ಸಾಂಗ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಪತ್ರದ ವಿವರ:
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್‌ಗೆ ನಿಮ್ಮ ವಿಭಾಗಗಳಿಂದ ಪರ್ಮಿಟ್ ಇಲ್ಲದೇ ಮಿರಜ್‌ಗೆ ಸರ್ಕಾರಿ ಬಸ್‌ಗಳು ಬರುತ್ತಿರುವ ಬಗ್ಗೆ ಶಿವಸೇನೆ ಸಾಂಗ್ಲಿ ಜಿಲ್ಲಾಧ್ಯಕ್ಷ ದೂರು ನೀಡಿದ್ದಾರೆ. ನಿಲುಗಡೆ ಇಲ್ಲದ ಸ್ಥಳಗಳಲ್ಲಿಯೂ ಕರ್ನಾಟಕದ ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗ್ತಿದೆ. ಇದರಿಂದ ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿದೆ. ಇದನ್ನು ವಿರೋಧಿಸಿ ಫೆಬ್ರವರಿ 23ರಂದು ಶಿವಸೇನೆ ರಸ್ತೆ ತಡೆ ಆಂದೋಲನ ನಡೆಸುತ್ತಿದ್ದು, ಶಿವಸೇನೆ ಪಕ್ಷದಿಂದ ಏನಾದರೂ ಆದರೆ ಅದಕ್ಕೆ ನೀವೇ ಜವಾಬ್ದಾರರು ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.
ಎಂಎಸ್ಆರ್ ಟಿಸಿ ಸಾಂಗ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಬರೆದ ಪತ್ರದ ವಿಚಾರವಾಗಿ ಪ್ರತಿಕ್ರಿಯಿಸಿರುವ ಎನ್‌ಡಬ್ಲ್ಯೂಕೆಆರ್‌ಟಿಸಿ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ, ಬೆಳಗಾವಿ ವಿಭಾಗದಿಂದ ನಿತ್ಯ 340 ಬಸ್‌ಗಳು ಮಹಾರಾಷ್ಟ್ರಕ್ಕೆ ತೆರಳುತ್ತವೆ. ಮಹಾರಾಷ್ಟ್ರ ಬಸ್‌ಗಳಿಗಿಂತ ಕರ್ನಾಟಕ ಬಸ್‌ಗಳು ಶುಚಿತ್ವ ಕಾಪಾಡಿಕೊಂಡ ಸುಸಜ್ಜಿತ ಬಸ್‌ಗಳಾಗಿವೆ. ಹೀಗಾಗಿ ಕರ್ನಾಟಕ ಪ್ರಯಾಣಿಕರಷ್ಟೇ ಅಲ್ಲ, ಮಹಾರಾಷ್ಟ್ರದ ಪ್ರಯಾಣಿಕರೂ ಸಹ ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಇದರಿಂದ ಹತಾಶೆಗೊಂಡು ಈ ರೀತಿ ಪತ್ರ ಬರೆದಿದ್ದಾರೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಅನಧಿಕೃತವಾಗಿ ಯಾವುದೇ ಬಸ್‌ಗಳು ಓಡಾಡುತ್ತಿಲ್ಲ ಎಂದು ನಾವು ಈಗಾಗಲೇ ಎಂಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದಿದ್ದಾರೆ.