ಬೆಳಗಾವಿ:ಕರ್ನಾಟಕ ಹಾಗೂ ಮಹಾರಾಷ್ಟ್ರ ತಾಯಿ-ಚಿಕ್ಕಮ್ಮ ಇದ್ದಂತೆ. ಈ ಪ್ರದೇಶದಲ್ಲಿರುವ ಪ್ರತಿಯೊಬ್ಬರಿಗೆ ತಾಯಿ ಪ್ರೀತಿ ಇದ್ದಷ್ಟು ಚಿಕ್ಕಮ್ಮನ ಪ್ರೀತಿಯೂ ಸಿಗುತ್ತದೆ ಎಂದು ನಟ, ಮಹಾರಾಷ್ಟ್ರ ಸಂಸದ ಡಾ. ಅಮೋಲ್ ಕೋಲ್ಹೆ ಹೇಳಿದರು. ಯಮಕನಮರಡಿ ಮತಕ್ಷೇತ್ರದ ಕಡೋಲಿ ಗ್ರಾಮದಲ್ಲಿ ಬಹುಜನ ಸಮಾಜ, ಕಡೋಲಿಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಹಾಗೂ ಕಡೋಲಿ ಗ್ರಾಮ ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ 'ಸ್ವರಾಜ ಸಂಕಲ್ಪ' ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೀತಿ ಹಾಗೂ ಶಿವ ಭಕ್ತಿಗೆ ಗಡಿ ಇರುವುದಿಲ್ಲ. ಇಂಥ ಒಂದು ಬಾಂಧವ್ಯ, ಅನ್ಯೋನ್ಯತೆಯ ಪ್ರದೇಶ ಇದು. ಇವು ಗಡಿ ಮೀರಿ ವ್ಯಾಪಿಸಿಕೊಂಡಿವೆ. ಈ ಎರಡೂ ರಾಜ್ಯಗಳು ರಾಷ್ಟ್ರದ ಪ್ರತೀಕ. ಮಾತೃಭಾಷೆಯ ಅಭಿಮಾನ ಇರಬೇಕು. ಅದು ಅತಿರೇಕಕ್ಕೆ ಹೋಗಬಾರದು. ಎಲ್ಲರೂ ಪ್ರೀತಿ ಸಹಬಾಳ್ವೆಯಿಂದ ಭಾಷೆಯನ್ನು ಗೌರವಿಸಬೇಕು ಮತ್ತು ಪ್ರೀತಿಸಬೇಕು ಎಂದು ಸಲಹೆ ನೀಡಿದರು.
ಅನ್ಯ ಭಾಷೆಯ ದ್ವೇಷ ಬೇಡ:ಮಾತೃಭಾಷೆಯ ಮೇಲೆ ಪ್ರತಿಯೊಬ್ಬರಿಗೆ ಅಭಿಮಾನ ಹಾಗೂ ಪ್ರೀತಿ ಇರಬೇಕು. ಆದರೆ ಅನ್ಯ ಭಾಷೆಯನ್ನು ದ್ವೇಷಿಸುವ ಮನಸ್ಥಿತಿ ಇರಬಾರದು. ಜಾತಿ ಮತ್ತು ಧರ್ಮ ಎರಡೂ ಕಲ್ಲುಗಳಿದ್ದಂತೆ. ಈ ಕಲ್ಲಿನಿಂದ ಗೋಡೆ ಕಟ್ಟಿದರೆ ಪರಸ್ಪರ ಮನುಷ್ಯ ಪ್ರತ್ಯೇಕವಾಗುತ್ತಾನೆ. ಇದೇ ಕಲ್ಲಿನಿಂದ ಸೇತುವೆ ನಿರ್ಮಿಸಿದರೆ ಪರಸ್ಪರರು ಸಂಪರ್ಕ ಸಾಧಿಸಲು ಸಾಧ್ಯ. ಈ ಕಲ್ಲುಗಳನ್ನು ಯುವಕರು ಕೈ ಯಲ್ಲಿ ಕೊಟ್ಟು ಬೇರೆಯವರು ತಲೆ ಒಡೆಯಲು ಹೇಳಿ ದ್ವೇಷ ಭಾವನೆ ಹುಟ್ಟಿಸಿ ಪ್ರಚೋದಿಸುವ ಮನಸ್ಥಿತಿಯವರೂ ಇದ್ದಾರೆ. ಆದರೆ ಈ ಕಲ್ಲುಗಳನ್ನು ಮೂರ್ತಿಯಾಗಿ ಪರಿವರ್ತಿಸುವ ಮನಸ್ಥಿತಿ ನಮ್ಮದಾಗಬೇಕೆಂದು ಹೇಳಿದರು.
ರಾಷ್ಟ ಮೊದಲು ಎಂಬ ಮನಸ್ಥಿತಿ ನಮ್ಮದಾಗಲಿ:ನಾವೆಲ್ಲರೂ ದೇಶ ಮೊದಲು ಎಂಬ ಭಾವನೆಯಿಂದ ಇದ್ದೇವೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿ.ವಿ.ಎಸ್.ಲಕ್ಷ್ಮಣ್, ಮಹಮದ್ ಶಮಿ ಹೀಗೆ ಅನೇಕ ಕ್ರೀಡಾಪಟುಗಳು ಆಡುವಾಗ ಅವರನ್ನು ನಾವು ಯಾವಾಗಲೂ ಒಂದು ರಾಜ್ಯ, ಜಾತಿಗೆ ಸೀಮಿತಗೊಳಿಸುವುದಿಲ್ಲ. ಅವರ ಆಟವನ್ನು ಮೆಚ್ಚಿ, ಪ್ರತಿಯೊಬ್ಬ ಭಾರತೀಯರು ಹುರಿದುಂಬಿಸುತ್ತಾರೆ. ನಾವೆಲ್ಲರೂ ಭಾರತೀಯ ಎಂಬ ಭಾವನೆ ಇರುತ್ತದೆ. ಜಾತಿ, ಧರ್ಮ,ಭಾಷೆ ಹೆಸರಿನಲ್ಲಿ ಪ್ರತೇಕವಾಗುವ ಬದಲು ರಾಷ್ಟ ಮೊದಲು ಎಂಬ ಮನಸ್ಥಿತಿ ನಮ್ಮದಾಗಬೇಕು ಎಂದು ಕರೆ ಕೊಟ್ಟರು.