ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಮನೆಯಲ್ಲಿ ಆವರಿಸಿದ ದುಃಖ ಬೆಳಗಾವಿ: ಮಧ್ಯಪ್ರದೇಶದಲ್ಲಿ ಸಂಭವಿಸಿದ ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳ ಅಪಘಾತದಲ್ಲಿ ಮರಣ ಹೊಂದಿದ ಬೆಳಗಾವಿಯ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಭಾನುವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ಅವರ ಪಾರ್ಥಿವ ಶರೀರ ಬೆಳಗಾವಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ವಾಯು ಪಡೆಯ ಯುದ್ಧ ಜೆಟ್ಗಳಾದ ಸುಖೋಯ್ 30 ಮತ್ತು ಮಿರಾಜ್ 2000 ವಿಮಾನಗಳು ದೈನಂದಿನ ಅಭ್ಯಾಸಕ್ಕೆ ಗ್ವಾಲಿಯರ್ ವಾಯುನೆಲೆಯಿಂದ ಟೇಕ್ ಆಫ್ ಆಗಿದ್ದವು. ಆದರೆ, ಇದಾದ ಕೆಲ ಹೊತ್ತಿನಲ್ಲೇ ಗ್ವಾಲಿಯರ್ ವಾಯುನೆಲೆಯಿಂದ ಸ್ವಲ್ವ ದೂರದಲ್ಲಿ ಆಕಾಶದಲ್ಲಿ ಅಪಘಾತ ಸಂಭವಿಸಿ, ಪತನಗೊಂಡಿದ್ದವು. ಇದರಲ್ಲಿ ಹನುಮಂತರಾವ್ ಸಾರಥಿ ಸೇರಿ ಮೂವರು ಪೈಲಟ್ಗಳು ಗಾಯಗೊಂಡಿದ್ದರು.
ಮಾರಣಾಂತಿಕ ಗಾಯಗೊಂಡಿದ್ದ ಬೆಳಗಾವಿಯ ವಿಂಗ್ ಕಮಾಂಡರ್, 34 ವರ್ಷದ ಹನುಮಂತರಾವ್ ಸಾರಥಿ ಮೃತ ಕೊನೆಯುಸಿರೆಳೆದಿದ್ದಾರೆ. ಈ ವಿಷಯವನ್ನು ಭಾರತೀಯ ವಾಯು ಪಡೆಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಅಲ್ಲದೇ, ಇಲ್ಲಿನ ಗಣೇಶಪುರದಲ್ಲಿರುವ ಹನುಮಂತರಾವ್ ಸಾರಥಿ ಮನೆಗೆ ಬೆಳಗಾವಿಯ ವಾಯು ಪಡೆ ತರಬೇತಿ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ ಕುಟುಂಬಸ್ಥರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
3 ವರ್ಷದ ಮಗಳು, 1 ವರ್ಷದ ಮಗನ ಅಗಲಿದ ಸಾರಥಿ: ಬೆಳಗಾವಿಯ ಗಣೇಶಪುರ ನಿವಾಸಿಯಾದ ಹನುಮಂತರಾವ್ ಆರ್. ಸಾರಥಿ ಅವರು 1987ರ ಅಕ್ಬೋಬರ್ 28ರಂದು ಜನಿಸಿದ್ದರು. ಬೆಳಗವಿಯಲ್ಲೇ ಅವರ ವಿದ್ಯಾಭ್ಯಾಸ ಮುಗಿಸಿ ಭಾರತೀಯ ವಾಯು ಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನೆಲೆಸಿದ್ದ ಹನುಮಂತರಾವ್ ಸಾರಥಿ ಅವರು ತಂದೆ, ತಾಯಿ, ಹೆಂಡತಿ ಮತ್ತು ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ಮೊದಲ ಮಗಳು ಮೂರು ವರ್ಷದವರಾಗಿದ್ದು, ಎರಡನೇ ಮಗ ಒಂದು ವರ್ಷದ ಪುಟ್ಟ ಕಂದ.
ಸೇನೆಯಲ್ಲೇ ತಂದೆ, ಅಣ್ಣನ ಸೇವೆ: ಹನುಮಂತರಾವ್ ಸಾರಥಿ ಅವರ ತಂದೆ ಹಾಗೂ ಅಣ್ಣ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ತಂದೆ ರೇವಣಸಿದ್ದಪ್ಪ ಸಾರಥಿ ಅವರು ಸೇನೆಯಲ್ಲಿ ಗೌರವ ಕ್ಯಾಪ್ಟನ್ (Honorary Captain) ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಮತ್ತೊಂದೆಡೆ, ಹಿರಿಯ ಸಹೋದರ ಪ್ರವೀಣ್ ಸಾರಥಿ ಕೂಡ ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕುಟುಂಬದಲ್ಲಿ ಆವರಿಸಿದ ದುಃಖ: ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಅವರ ಮರಣದ ವಿಷಯ ತಿಳಿದು ಗಣೇಶಪುರದಲ್ಲಿರುವ ಮನೆಯಲ್ಲಿ ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲದೇ, ಗಣೇಶಪುರ ಸುತ್ತ-ಮುತ್ತಲು ದುಃಖದ ಛಾಯೆ ಆವರಿಸಿದೆ. ಮನೆಗೆ ಭೇಟಿ ನೀಡಿದ ಬೆಳಗಾವಿಯ ವಾಯು ಪಡೆ ತರಬೇತಿ ಕೇಂದ್ರದ ಅಧಿಕಾರಿಗಳು, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ನಾಳೆ ಬೆಳಿಗ್ಗೆ ವಿಶೇಷ ವಿಮಾನದಲ್ಲಿ ಹನುಮಂತರಾವ್ ಸಾರಥಿ ಪಾರ್ಥಿವ ಶರೀರ ತವರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸುಖೋಯ್ - ಮಿರಾಜ್ ಯುದ್ಧ ವಿಮಾನಗಳ ಅಪಘಾತ: ವಿಂಗ್ ಕಮಾಂಡರ್, ಕನ್ನಡಿಗ ಹನುಮಂತರಾವ್ ಸಾರಥಿ ಮರಣ