ಬೆಳಗಾವಿ:ಈ ಪುಟ್ಟ ಗ್ರಾಮದಲ್ಲಿರುವ ಸುಮಾರು 42ಕ್ಕೂ ಅಧಿಕ ಮಂದಿ ಮಂದಿ ಮಹಿಳೆಯರು ಪರಿಸರ ಸ್ನೇಹಿ ತರಹೇವಾರಿ ಬ್ಯಾಗ್‍ಗಳನ್ನು ತಯಾರಿಸುತ್ತಿದ್ದು, ಇವುಗಳಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಡಿಮ್ಯಾಂಡ್ ಇದೆ. ಹಳ್ಳಿಯಲ್ಲಿದ್ದುಕೊಂಡು ವಿದೇಶಗಳಿಗೆ ವಸ್ತುಗಳನ್ನು ರಫ್ತು ಮಾಡುತ್ತಿರುವ ಮಹಿಳೆಯರ ಈ ಕಾರ್ಯ ಇತರರಿಗೂ ಸ್ಫೂರ್ತಿಯಾಗಿದೆ.
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮವೀಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಕಳೆದ ಹಲವು ವರ್ಷಗಳಿಂದ ಈ ಗ್ರಾಮದ ಮಹಿಳೆಯರು ಪರಿಸರ ಸ್ನೇಹಿ ಬ್ಯಾಗ್‍ಗಳನ್ನು ತಯಾರಿಸಿ, ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಮನೆ ಕೆಲಸ ಮುಗಿಸಿ ಉಳಿದ ಸಮಯದಲ್ಲಿ ಈ ಮಹಿಳೆಯರು ಈ ಬ್ಯಾಗ್‍ಗಳನ್ನು ಸಿದ್ಧಪಡಿಸುತ್ತಾರೆ.
ಬ್ಯಾಗ್ ತಯಾರಿಸಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಮಹಿಳೆಯರು ಬ್ಯಾಗ್ ತಯಾರಿಕೆಯಲ್ಲಿ ಸೆಣಬು, ದಾರ ಸೇರಿ ವಿವಿಧ ವಸ್ತುಗಳ ಬಳಕೆ:ಮೇಕಲಮರಡಿ ಗ್ರಾಮದ ಮಹಿಳೆಯರು 'ಉನ್ನತಿ ಹ್ಯಾಂಡಿಕ್ರಾಫ್ಟ್' ಹೆಸರಿನಲ್ಲಿ ಸಂಸ್ಥೆ ಹುಟ್ಟು ಹಾಕಿದ್ದಾರೆ. ಈ ಸಂಸ್ಥೆಯಿಂದ ತಯಾರಾಗುವ ವಸ್ತುಗಳು ಪಕ್ಕಾ ಪರಿಸರ ಸ್ನೇಹಿಯಾಗಿವೆ. ಸೆಣಬು, ದಾರದ ಸಹಾಯದಿಂದ ವಸ್ತುಗಳನ್ನು ಸಿದ್ಧಪಡಿಸಲಾಗುತ್ತಿದೆ. ಕನಿಷ್ಠ 15 ವರ್ಷಗಳ ಕಾಲ ಈ ಬ್ಯಾಗ್‍ಗಳು ಬಾಳಿಕೆ ಬರುತ್ತವೆ. ಹಾಳಾದ ನಂತರ ಹೊರಗೆ ಎಸೆದರೂ ಈ ಬ್ಯಾಗ್‍ಗಳಿಂದ ಪರಿಸರಕ್ಕೆ ಯಾವುದೇ ತೊಂದರೆ ಇಲ್ಲ. ಈ ಕಾರಣಕ್ಕೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಬ್ಯಾಗ್‍ಗಳಿಗೆ ಫುಲ್ ಡಿಮ್ಯಾಂಡ್ ಇದೆಯಂತೆ.
ಬ್ಯಾಗ್ ತಯಾರಿಸಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಮಹಿಳೆಯರು ಬೇರೆ ದೇಶಗಳಿಗೆ ರಫ್ತಾಗುತ್ತವೆ ಇಲ್ಲಿನ ಬ್ಯಾಗ್‍ಗಳು:ಪ್ರತಿ ಮೂರು ತಿಂಗಳಿಗೊಮ್ಮೆ ಅಮೆರಿಕ, ಇಂಗ್ಲೆಂಡ್, ಸ್ಪೇನ್ ಹಾಗೂ ಜರ್ಮನಿ, ಆಸ್ಟ್ರೇಲಿಯಾಗಳಿಂದ ಆರ್ಡ್‍ರ್ ಬರುತ್ತವೆಯಂತೆ. ಈ ಹಳ್ಳಿಯಲ್ಲಿ ಸಿದ್ಧಗೊಳ್ಳುವ ವಸ್ತುಗಳನ್ನು ಮುಂಬೈನಿಂದ ಶಿಪ್ ಮೂಲಕ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಲಾಂಡ್ರಿ ಬಾಸ್ಕೆಟ್, ಕುಶನ್ ಕವರ್, ಹಾರ್ಡ್ ಸ್ಕ್ವೇರ್ ಲಾಂಡ್ರಿ ಬ್ಯಾಗ್, ಹಾರ್ಡ್ ಕುಶನ್ ಕವರ್, ಹಾರ್ಡ್ ಬ್ಯಾಗ್, ನೀಲ್ ಕಾಯಿಲ್ ಬಾಸ್ಕೆಟ್, ನೀಲ್ ಬ್ಯಾಗ್, ಕಾಪಿ ಲಾಂಡರಿ ಬ್ಯಾಗ್ಸ್, ಸ್ವೇಚಿಸ್, ನೀಲ್ ಸ್ವೇಚಿಸ್, ಯೋಗ ಮ್ಯಾಟ್, ವ್ಯಾನಿಟಿ ಬ್ಯಾಗ್ ಹೀಗೆ 365 ಡಿಸೈನ್‍ಗಳಲ್ಲಿ ಮಹಿಳೆಯರು ವಸ್ತುಗಳನ್ನು ಸಿದ್ಧಪಡಿಸುತ್ತಾರೆ. ಆಡಿನ ಚರ್ಮ ಬಳಸಿ ಮನೆ ಸೌಂದರ್ಯ ವೃದ್ಧಿಸುವ ವಸ್ತುಗಳನ್ನು ತಯಾರಿಸಿ ವಿದೇಶಗಳಿಗೆ ಕಳಿಸಿಕೊಡಲಾಗುತ್ತದೆ. ಇವರು ಬೆಳಗಾವಿ ಹಾಗೂ ಹುಬ್ಬಳ್ಳಿಯಿಂದ ಕಚ್ಚಾವಸ್ತುಗಳನ್ನು ತರಿಸಿಕೊಳ್ಳುತ್ತಾರೆ.
ಮಹಿಳೆಯರು ತಯಾರಿಸಿರುವ ವಿವಿಧ ಬಗೆಯ ಬ್ಯಾಗ್‍ಗಳು ಬ್ರ್ಯಾಂಡಿಂಗ್ ಹೇಗೆ:ದೆಹಲಿ ಸಮೀಪದ ನೋಯ್ಡಾದಲ್ಲಿ ಪ್ರತಿವರ್ಷ ಕೈಯಿಂದ ಸಿದ್ಧಪಡಿಸಲಾದ ಪರಿಸರ ಸ್ನೇಹಿ ವಸ್ತುಗಳ ಪ್ರದರ್ಶನ ನಡೆಯುತ್ತದೆ. ಹಲವು ದೇಶಗಳ ವ್ಯಾಪಾರಿಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ಈ ಪ್ರದರ್ಶನ ಅಕ್ಟೋಬರ್ನಿಂದ ಫೆಬ್ರವರಿವರೆಗೆ ನಡೆಯುತ್ತದೆ. ಈ ಮೂಲಕ ಉನ್ನತಿ ಹ್ಯಾಂಡಿಕ್ರಾಫ್ಟ್ ಸಂಸ್ಥೆಯ ವಸ್ತುಗಳು ಪ್ರದರ್ಶನದಿಂದ ದೇಶ-ವಿದೇಶಗಳಿಗೆ ಪರಿಚಯವಾಗುತ್ತಿವೆ. ವಿದೇಶಗಳಲ್ಲಿರುವ ವ್ಯಾಪಾರಿಗಳು ತಮಗೆ ಬೇಕಾದ ಡಿಸೈನ್ ವಸ್ತುಗಳನ್ನು ಇ-ಮೇಲ್ ಮೂಲಕ ಆರ್ಡರ್ ನೀಡುತ್ತಾರೆ. ಆಗ 90 ದಿನದೊಳಗೆ ಮಹಿಳೆಯರು ಬ್ಯಾಗ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಸಿದ್ಧಪಡಿಸುತ್ತಾರೆ. ಬಳಿಕ ಹಡಗು ಮೂಲಕ ಕಳಿಸಿಕೊಡಲಾಗುತ್ತದೆ. ಅಗತ್ಯವಿದ್ದಾಗ ವಿಮಾನದ ಮೂಲಕವೂ ವಸ್ತುಗಳನ್ನು ರಫ್ತು ಮಾಡಲಾಗುತ್ತಿದೆ.
ಬ್ಯಾಗ್ ತಯಾರಿಸಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಮಹಿಳೆಯರು ಮಹಿಳೆಯರ ಸ್ವಾವಲಂಬಿ ಬದುಕು:ಮೇಕಲಮರಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ಕಳೆದ ಹಲವು ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕುಟುಂಬ ನಿರ್ವಹಣೆ ಜೊತೆಗೆ ನಾರಿಯರು ಈ ಉದ್ಯೋಗದಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಸ್ತ್ರೀಯರು ತಯಾರಿಸುವ ಬ್ಯಾಗ್‍ಗಳನ್ನು ಅದೇ ಗ್ರಾಮದ ವಿಶೇಷಚೇತನ ವ್ಯಕ್ತಿ ದಸ್ತಗೀರ ಸಾಬ್ ಜಮಾಧಾರ್ ಎಂಬುವವರು ವಿದೇಶಗಳಿಗೆ ರಫ್ತು ಮಾಡುತ್ತಾರೆ. ವಿದೇಶದಲ್ಲಿರುವ ಕಂಪನಿಯ ಮಾಲೀಕರ ಜೊತೆ ಇವರೆ ಸಂವಹನ ಹಾಗೂ ಇ-ಮೇಲ್ ವ್ಯವಹಾರ ನಡೆಸುತ್ತಾರೆ. ಮಹಿಳೆಯರ ಶ್ರಮವಹಿಸಿ ತಯಾರಿಸುವ ಪರಿಸರ ಸ್ನೇಹಿ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡುವ ಜವಾಬ್ದಾರಿಯನ್ನು ದಸ್ತಗೀರಸಾಬ್ ನಿರ್ವಹಿಸುತ್ತಿದ್ದಾರೆ. ಮಹಿಳೆಯರಿಗೆ ಪ್ರತಿವರ್ಷ ಹೊಸ ಹೊಸ ಡಿಸೈನ್ ವಸ್ತುಗಳನ್ನು ಸಿದ್ಧಪಡಿಸುವ ಸಂಬಂಧ ತರಬೇತಿ ನೀಡಲಾಗುತ್ತದೆ. ಈ ಮೂಲಕ ಅವರು ಇತರರಿಗೆ ಮಾದರಿಯಾಗಿದ್ದಾರೆ.