ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಮದುವೆ ಊಟ ಸವಿದು 100ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ನಡೆದಿದೆ. ವಾಂತಿ ಭೇದಿಯಿಂದ ಬಳಲುತ್ತಿದ್ದ ಅವರನ್ನು ವಿವಿಧ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಗ್ರಾಮದಲ್ಲಿ ಸೋಮವಾರ ಪಟೇಲ್ ಬಂಧುಗಳ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ಊಟ ಮಾಡಿ ಮನೆಗೆ ವಾಪಸ್ ಆಗುತ್ತಿದ್ದಂತೆ ಹಲವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಇಡೀ ರಾತ್ರಿ ಪರದಾಟ ನಡೆಸಿದ ಬಳಿಕ ಸುತ್ತಮುತ್ತಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
10ಕ್ಕೂ ಹೆಚ್ಚು ವಿವಿಧ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಹಿರೇಕೋಡಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿ ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಸುಸ್ತು ಕಾಣಿಸಿಕೊಂಡವರನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮದುವೆ ಸಮಾರಂಭದಲ್ಲಿ 500ಕ್ಕೂ ಹೆಚ್ಚು ಜನ ಭಾಗಿಯಾಗಿದ್ದು, ಮಹಾರಾಷ್ಟ್ರದ ಮಿರಜ್‌ನಿಂದಲೂ ಈ ಮದುವೆಗೆ ಆಗಮಿಸಿದ್ದರು. ಅವರಲ್ಲಿ ಕೂಡಾ ವಾಂತಿ ಭೇದಿ ಕಾಣಿಸಿಕೊಂಡಿದೆ.
ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕೋಡಿಯ ತಹಶೀಲ್ದಾರ್ ಚಿದಂಬರ ಕುಲಕರ್ಣಿ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಚಿದಂಬರ ಕುಲಕರ್ಣಿ, 100ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ ಎಂಬ ಮಾಹಿತಿ ಇದೆ. 50ಕ್ಕೂ ಹೆಚ್ಚು ಜನರು ಚಿಕ್ಕೋಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ವೈದ್ಯರ ತಂಡ ಹಿರೆಕೋಡಿಯಲ್ಲಿ ಬೀಡುಬಿಟ್ಟಿದ್ದು ತಪಾಸಣೆ ನಡೆಸುತ್ತಿದೆ.