ಬೆಳಗಾವಿ:ಕೇವಲ 15 ದಿನಗಳ ಅವಧಿಯಲ್ಲಿ ಕುಂದಾನಗರಿಯಲ್ಲಿ ನೈತಿಕ ಪೊಲೀಸಗಿರಿಗೆ ಸಂಬಂಧಿಸಿದ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದಾಗಿ ಯುವ ಸಮೂಹ ಬೆಚ್ಚಿ ಬಿದ್ದಿದೆ.
ಅಕ್ಟೋಬರ್ 14 ರಂದು ಕಿಡಿಕೇಡಿಗಳು ನಡೆಸಿದ ಕೃತ್ಯ ಈಗ ಬೆಳಕಿಗೆ ಬಂದಿದೆ. ಅನ್ಯ ಕೋಮಿನ ಯುವತಿ ಜೊತೆ ಯುವಕ ಸುತ್ತಾಡುತ್ತಿದ್ದಕ್ಕೆ ಹಲ್ಲೆ ನಡೆಸಲಾಗಿದೆ. ರಾಯಬಾಗ ಮೂಲದ ಯುವಕ, ಸಂಕೇಶ್ವರ ಮೂಲದ ಯುವತಿ ಅ.14ರಂದು ಬೆಳಗಾವಿಗೆ ಆಗಮಿಸಿದ್ದು, ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಆಟೋಗಾಗಿ ಈ ಜೋಡಿ ಕಾದು ನಿಂತಿತ್ತು.
ಆಟೋ ಚಾಲಕನ ಬಳಿ ಯಾವುದಾದರೂ ಉದ್ಯಾನಕ್ಕೆ ಕರೆದುಕೊಂಡು ಹೋಗುವಂತೆ ಪ್ರೇಮಿಗಳು ಕೇಳಿದ್ದಾರೆ. ಆದರೆ, ಆತ ಉದ್ಯಾನದ ಬದಲಾಗಿ ಅಮನ್ ನಗರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅನ್ಯಕೋಮಿನ ಯುವಕನ ಜೊತೆಗೆ ಓಡಾಡಿದ್ದಕ್ಕೆ ಯುವತಿಯನ್ನು ಥಳಿಸಲಾಗಿದೆ.
ಅವರಿಬ್ಬರ ಬಳಿಯಿದ್ದ 20 ಸಾವಿರ ಮೌಲ್ಯದ ಮೊಬೈಲ್, 50 ಸಾವಿರ ನಗದು ಹಣ ಮತ್ತು ಆಧಾರ್ ಕಾರ್ಡ್, ಎಟಿಎಂ ಕಾರ್ಡ್ ಕಸಿದುಕೊಂಡು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ತಕ್ಷಣವೇ ಹಲ್ಲೆಗೊಳಗಾದ ಯುವತಿ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. 20 ಜನರ ಗುಂಪಿನಿಂದ ರಾಡ್, ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.