ಬೆಳಗಾವಿ :ನನ್ನ ಸಹೋದರಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ವಿಷಕನ್ಯೆ ಎಂದಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರು ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಆಧಾರ ರಹಿತ ಆರೋಪ ಮಾಡ್ತಿದ್ದಾರೆ. ಕಾಂಗ್ರೆಸ್‌ಗೆ ರಾಜೀನಾಮೆ ನೀಡಬೇಡಿ ಎಂದು ಅವರಲ್ಲಿ ಕೋರಿದ್ವಿ. ಅಂದಿನಿಂದ ನಮ್ಮ ವಿರುದ್ಧ ಸಿಟ್ಟಾಗಿದ್ದಾರೆ. ಅವರ ಹೇಳಿಕೆಯಿಂದ ಬಿಜೆಪಿಗೆ ನಷ್ಟವಾಗಲಿದೆ. ನಮ್ಮ ಕಾರ್ಖಾನೆಯ ಎಲ್ಲ ದಾಖಲೆಗಳು ಸಾರ್ವಜನಿಕವಾಗಿ ಲಭ್ಯ ಇವೆ ಎಂದರು.
ರಮೇಶ್ ಒಡೆತನದ ಸೌಭಾಗ್ಯ ಲಕ್ಷ್ಮಿ ಕಾರ್ಖಾನೆಯೇ ಬ್ಯಾಂಕ್‌ಗೆ ವಂಚಿಸಿ ದಿವಾಳಿತನಕ್ಕೆ ಬಂದಿದೆ. ಎಥೆನಾಲ್ ಘಟಕ ತೆರೆಯುವುದಾಗಿ ಹೇಳಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ. ಆದರೆ ಎಥೆನಾಲ್ ಘಟಕ ತೆರೆಯದೇ ಸೊಸೈಟಿಗೆ ವಂಚಿಸಿದ್ದಾರೆ. ಈ ಕಾರಣಕ್ಕೆ ಸೌಭಾಗ್ಯ ಲಕ್ಷ್ಮಿ ಕಾರ್ಖಾನೆ ದಿವಾಳಿತನಕ್ಕೆ ಸಿಲುಕಿದೆ ಎಂದು ತಿರುಗೇಟು ನೀಡಿದರು.
ಇವತ್ತು ರಮೇಶ್ ಜಾರಕಿಹೊಳಿ ಅವರು ನನ್ನ ಸಹೋದರಿ ಹಾಗೂ ನಮ್ಮ ಸಕ್ಕರೆ ಕಾರ್ಖಾನೆ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಉತ್ತರ ಕೊಡಲು ನಾನು ಇಲ್ಲಿಗೆ ಬಂದಿದ್ದೇನೆ. ಹರ್ಷ ಶುಗರ್ ಕಾರ್ಖಾನೆ ಎಲ್ಲಾ ವ್ಯವಹಾರಗಳನ್ನು ಪಾರದರ್ಶಕವಾಗಿ ಮಾಡುತ್ತಾ ಬಂದಿದೆ. ಯಾರು ಬೇಕಿದ್ದರೂ ನೋಡಬಹುದು. ಇಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಯಾವುದೇ ರೈತರಿಗೆ ನಾವು ಮೋಸವನ್ನು ಮಾಡಿಲ್ಲ. ರಮೇಶ್ ಜಾರಕಿಹೊಳಿ ಅವರು ಆಧಾರ ರಹಿತ ಆರೋಪ ಮಾಡಿದ್ದಾರೆ. ಕಪ್ಪು ಹಣದ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಚನ್ನರಾಜ್ ಸವಾಲು ಹಾಕಿದರು.
ಮಾಧ್ಯಮಗಳ ಮುಂದೆ ಬರೀ ಸುಳ್ಳು ಹೇಳುತ್ತಾರೆ :ಮಾಜಿಜಿ ಸಚಿವ ರಮೇಶ್ ಜಾರಕಿಹೊಳಿ ಮಾಧ್ಯಮಗಳ ಮುಂದೆ ಬಂದರೆ ಬರೀ ಸುಳ್ಳು ಹೇಳುತ್ತಾರೆ. ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಸುಲಭ. ಸುಳ್ಳು ಹೇಳುವುದನ್ನು ಬಿಟ್ಟು ದಾಖಲೆ ಸಮೇತ ಬನ್ನಿ. ಉತ್ತರ ಕೊಡುತ್ತೇವೆ. ಬಾಲಿಶ ಹೇಳಿಕೆ ನೀಡುವುದನ್ನು ನಿಲ್ಲಿಸಿ ಎಂದು ಜಾರಕಿಹೊಳಿ ವಿರುದ್ಧ ಎಂಎಲ್ಸಿ ಹಟ್ಟಹೊಳಿ ಹರಿಹಾಯ್ದರು.