ಕರ್ನಾಟಕ

karnataka

ETV Bharat / state

ಬರೀ ಸಂಜನಾ, ರಾಗಿಣಿ ಅಷ್ಟೇನಾ..? ಗಂಡಸರು ಅಫೀಮು, ಗಾಂಜಾ ತೆಗೆದುಕೊಳ್ಳುವುದಿಲ್ವಾ?: ಬಿ.ಕೆ. ಹರಿಪ್ರಸಾದ್​

ಯಾವುದೇ ಕಾನೂನು ಬಾಹಿರ ಕೆಲಸಗಳಲ್ಲಿ ಅಲ್ಪಸಂಖ್ಯಾತರನ್ನು ಟಾರ್ಗೆಟ್​ ಮಾಡುವುದು ಬಿಜೆಪಿಯ ಫ್ಯಾಷನ್ ಆಗಿದೆ. ಇದೀಗ, ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಸೆಲೆಬ್ರಿಟಿಗಳು, ಅಲ್ಪಸಂಖ್ಯಾತ ನಾಯಕರನ್ನು ಗುರಿಯಾಗಿಸಲಾಗುತ್ತಿದೆ ಎಂದು ವಿಧಾನಪರಿಷತ್​ ಸದಸ್ಯ ಬಿ.ಕೆ. ಹರಿಪ್ರಸಾದ್​ ಆರೋಪಿಸಿದರು.

By

Published : Sep 13, 2020, 1:50 PM IST

MLC BK Hariprasad Reaction on Drug link Case
ಡ್ರಗ್ಸ್ ಜಾಲ ನಂಟು ಕುರಿತು ಬಿ.ಕೆ ಹರಿಪ್ರಸಾದ್​ ಪ್ರತಿಕ್ರಿಯೆ

ಬೆಳಗಾವಿ: ಕೇಂದ್ರದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವೈಫಲ್ಯ ಮುಚ್ಚಿಹಾಕಲು ರಿಯಾ ಚಕ್ರವರ್ತಿ, ಕಂಗನಾ ಅಂತಾ ನಡೆಯುತ್ತಿದ್ರೆ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಸಂಜನಾ, ರಾಗಿಣಿ ಅಂತಾ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿಧಾನಪರಿಷತ್​ ಸದಸ್ಯ ಸದಸ್ಯ ಬಿ.ಕೆ. ಹರಿಪ್ರಸಾದ್​ ಆರೋಪಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಡ್ರಗ್ಸ್​ ವಿಚಾರದಲ್ಲಿ ಬರೀ ಹೆಣ್ಣು ಮಕ್ಕಳ ಹೆಸರು ಹೇಳುತ್ತಿದೆ. ಹಾಗಾದ್ರೆ, ಗಂಡಸರು ಯಾರು ಅಫೀಮು, ಗಾಂಜಾ ತೆಗೆದುಕೊಳ್ಳುವುದಿಲ್ವಾ. ಇದರಲ್ಲಿ ಯಾರು ಇದ್ದಾರೆ ಅನ್ನುವುದರ ಬಗ್ಗೆ ಹೇಳಲು ಹೋಗುವುದಿಲ್ಲ. ಬಿಜೆಪಿಯವರು ಕೋವಿಡ್​ ನಿಯಂತ್ರಣದಲ್ಲಿ ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಲು ಸೆಲೆಬ್ರಿಟಿಗಳ ಮೇಲೆ ಮಾದಕ ವಸ್ತುಗಳ ಆರೋಪ ಮಾಡುತ್ತಿದ್ದಾರೆ ಎಂದರು.

ವಿಧಾನಪರಿಷತ್​ ಸದಸ್ಯ ಬಿ.ಕೆ. ಹರಿಪ್ರಸಾದ್​ ಪ್ರತಿಕ್ರಿಯೆ

ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ ಶಾಸಕ ಜಮೀರ್​ ಅಹ್ಮದ್ ಹೆಸರು ಕೇಳಿ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿ, ಯಾವುದೇ ಕಾನೂನು ಬಾಹಿರ ಕೆಲಸಗಳಲ್ಲಿ ಅಲ್ಪಸಂಖ್ಯಾತರನ್ನ ಟಾರ್ಗೆಟ್ ಮಾಡುವುದು ಬಿಜೆಪಿಯವರಿಗೆ ಫ್ಯಾಷನ್ ಆಗಿಬಿಟ್ಟಿದೆ. ಕಲಬುರಗಿಯಲ್ಲಿ 1 ಸಾವಿರ ಕೆಜಿ ಗಾಂಜಾ ಸಾಗಣೆಯಲ್ಲಿ ಬಂಧಿತನಾದವನು ಯಾವ ಪಕ್ಷದವನು. ಯಾವ ಪಕ್ಷದ ನಾಯಕ, ಯಾವ ಧರ್ಮಕ್ಕೆ ಸೇರಿದವನು ಎಂಬುದರ ಬಗ್ಗೆ ಯಾಕೆ ಮಾತನಾಡ್ತಿಲ್ಲ ಎಂದು ಹರಿಪ್ರಸಾದ್​ ಪ್ರಶ್ನಿಸಿದರು. ಬರೀ ಜಮೀರ್ ಅಹ್ಮದ್ ಖಾನ್ ಅಷ್ಟೇ ಅಲ್ಲ. ಬಿಜೆಪಿಯವರ ಧರ್ಮಗ್ರಂಥದಲ್ಲಿ ಹೇಳಿದ್ದಾರೆ ನೋಡಿ, ದೇಶದ್ರೋಹಿಗಳು ಅಂದ್ರೆ ಅಲ್ಪಸಂಖ್ಯಾತರು, ಕಮ್ಯುನಿಸ್ಟರು. 1923 ರಿಂದ ಕಾಂಗ್ರೆಸ್​ ಫ್ಯಾಸಿಸ್ಟ್​ ಮನೋಭಾವದವರ ವಿರುದ್ಧ ಪಕ್ಷ ಸಂಘಟನೆ ಮಾಡುತ್ತಿದೆ. ನಾನು ಇಡೀ ರಾಷ್ಟ್ರದಲ್ಲಿ ಕೆಲಸ ಮಾಡಿದ್ದೇನೆ. ಬಿಜೆಪಿಯ ದೊಡ್ಡ ಡೊಡ್ಡ ನಾಯಕರು ಅಫೀಮು ತೆದುಕೊಳ್ಳದೆ ಹೊರ ಬರುತ್ತಿರಲಿಲ್ಲ. ಎಲ್ಲವೂ ನನಗೆ ಗೊತ್ತಿದೆ. ಆದರೆ ಹೆಸರು ಹೇಳುವುದಿಲ್ಲ. ಆದ್ದರಿಂದ ಒಂದು ಸಮುದಾಯದವರನ್ನು ಗುರಿಯಾಗಿಸುವುದು ಸರಿಯಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ ಎಂದು ಹೇಳಿದರು.

ಕಾಂಗ್ರೆಸ್​ ಸೇವಾದಳಕ್ಕೆ ಆರ್​ಎಸ್​ಎಸ್​​ ಮಾದರಿ ತರಬೇತಿ ನೀಡುವ ಬಗ್ಗೆ ಪ್ರತಿಕ್ರಿಯಿಸಿ, ಆರ್​ಎಸ್​ಎಸ್​ ತರ ನಮ್ಮ ಕಾರ್ಯಕರ್ತರನ್ನು ತಯಾರು ಮಾಡುವುದಿಲ್ಲ. ನಮಗೆ ಆ ರೀತಿಯ ಸಂಘಟನೆ ಬೇಕಾಗಿಲ್ಲ. ಕಾಂಗ್ರೆಸ್​ ಸಿದ್ಧಾಂತವನ್ನು ಗಮನದಲ್ಲಿಕೊಂಡು ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು. ಕಾಂಗ್ರೆಸ್​ ಪಕ್ಷ ಲಾಠಿ ಹಿಡಿದ್ರೆ ಬೇರೆಯವರಿಗೆ ಸಹಾಯವಾಗುತ್ತದೆ. ಆದರೆ, ಬೇರೆ ಪಕ್ಷ ಲಾಠಿ ಹಿಡಿದ್ರೆ ಜನರಿಗೆ ಭಯ ಶುರುವಾಗುತ್ತದೆ. ಆದ್ದರಿಂದ, ಅಂತಹ ಸಂಘಟನೆಗಳೊಂದಿಗೆ ನಮಗೆ ಸಂಬಂಧವಿಲ್ಲ. ಆರ್​ಎಸ್​ಎಸ್​​​​ನವರಿಂದ ಕಲಿಯಲು ನಮಗೆ ಏನು ಇಲ್ಲ, ಅವರೇ ನಮ್ಮಿಂದ ಕಲಿಯಬೇಕು. ಅವರು ಸ್ವಾತಂತ್ರ್ಯದ ವಿರುದ್ಧ ಇದ್ದವರು. ಮಹಾತ್ಮ ಗಾಂಧಿ ಲಾಠಿ ಹಿಡಿದದ್ದು ಸಹಾಯ ಮಾಡಲು. ಆರ್​ಎಸ್​ಎಸ್​​ ಯಾಕೆ ಲಾಠಿ ಹಿಡಿಯಿತು ಅನ್ನೋದು ಜಗತ್ತಿಗೆ ಗೊತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್​ ಸೇವಾದಳ ಕೆಲಸ ಮಾಡಿದೆ. ಈಗ ಕಾರ್ಯಕರ್ತರಿಗೆ ಬೌದ್ಧಿಕ ತರಬೇತಿ ನೀಡಿ, ದೇಶದ ಅಭಿವೃದ್ಧಿಗೆ ಪೂರಕವಾಗಿ ತಯಾರಿ ಮಾಡಲಾಗ್ತಿದೆ ಎಂದು ಬಿ ಕೆ ಹರಿಪ್ರಸಾದ್​ ಹೇಳಿದ್ರು.

ABOUT THE AUTHOR

...view details