ಬೆಳಗಾವಿ: ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಪರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್ ಮಾಡಿದ್ದಾರೆ. ಈ ಸಂಬಂಧ ಬೆಳಗಾವಿ ಜಿಲ್ಲೆಯ ಗೋಕಾಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿಗೆ ಮಂತ್ರಿಸ್ಥಾನ ಕೊಡಬೇಕು. ಬಿಜೆಪಿ ಸರ್ಕಾರ ಬರಲು ಅವರ ಕಾಂಟ್ರಿಬ್ಯೂಷನ್ ಇದೆ. ಅವರ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಮೋಸ ಮಾಡಿದವರಲ್ಲಿ ನಮ್ಮಲ್ಲೂ ಒಬ್ಬ ಮಹಾನಾಯಕನ ಮಗ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಮಾತನಾಡಿದವರೇ ಕೆಪಿಎಸ್‌ಸಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ನಿನ್ನೆ ನನ್ನ ಮೇಲೂ ಎಸಿಬಿಗೆ ದೂರು ನೀಡಿದ್ದಾರೆ. ಯತ್ನಾಳ ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅದರ ಬಗ್ಗೆ ಅವರಿಗೆ ಸಾಕಷ್ಟು ಮಾಹಿತಿ ಇರಬಹುದು, ಅದನ್ನು ತನಿಖೆ ಮಾಡಬೇಕು. ಡಿಕೆಶಿ ಅವರ ತಮ್ಮ ಬಡಕುಟುಂಬದ ಬಳಿ 25 ಲಕ್ಷ ರೂ ಹಣ ತೆಗೆದುಕೊಂಡಿದ್ದಾರೆ. ಕೇಳಲು ಹೋದ ಆ ಕುಟುಂಬದ ತಾಯಿ, ಮಗನಿಗೆ ಬೆದರಿಕೆ ಹಾಕಿದ್ದಾರೆ. ಇಂಥವರ ವಿರುದ್ಧ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.