ಬೆಳಗಾವಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪರಿಹಾರ ನಿಧಿ (ಎನ್‍ಡಿಆರ್‍ಎಫ್) ಯ ಗೈಡ್‍ಲೈನ್‍ಗಳನ್ನು ತಕ್ಷಣವೆ ಬದಲಿಸಬೇಕು ಎಂದು ಅರಸಿಕೇರಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಅಕಾಲಿಕ ಮಳೆಯಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಬೆಳೆದ ಬೆಳೆಯೂ ಸತತ ಸುರಿದ ಮಳೆಯಿಂದ ನೀರು ಪಾಲಾಗಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರಾಜ್ಯದ ರೈತರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಎನ್‍ಡಿಆರ್‍ಎಫ್ ನಿಮಯಗಳ ಅನ್ವಯ ರಾಜ್ಯ ಸರ್ಕಾರ ಪರಿಹಾರ ನೀಡಲು ಮುಂದಾಗುತ್ತಿದೆ. ಒಂದು ಹೆಕ್ಟೇರ್ ರಾಗಿ ಬೆಳೆ ಬೆಳೆಯಲು 30 ಸಾವಿರ ಖರ್ಚಾಗುತ್ತದೆ. ಆದರೆ ಎನ್‍ಡಿಆರ್‍ಎಫ್ ನಿಯಮದಡಿ ಪರಿಹಾರ ನೀಡಿದರೆ ಒಂದು ಹೆಕ್ಟೇರ್ ಜಮೀನಿರುವ ರೈತನಿಗೆ ಕೇವಲ 6,500 ಪರಿಹಾರ ಸಿಗುತ್ತಿದೆ. ಸಂಕಷ್ಟದಲ್ಲಿರುವ ರೈತನಿಗೆ ಲಾಭ ಕೊಡುವುದು ಬೇಡ. ಒಂದು ಹೆಕ್ಟೇರ್ಗೆ ತಾನು ವೆಚ್ಚ ಮಾಡಿದ ಹಣವನ್ನಾದರೂ ರೈತನಿಗೆ ಸರ್ಕಾರ ನೀಡಬೇಕು.
ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸದಿದ್ದರೆ ನಮಗೆ ಸರ್ಕಾರ ಏಕೆ ಬೇಕು ಎಂಬ ಭಾವನೆ ಬರುತ್ತದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಸೇರಿ ಎನ್‍ಡಿಆರ್‍ಎಫ್ ಗೈಡ್‍ಲೈನ್ ಬದಲಿಸಬೇಕು ಎಂದು ಆಗ್ರಹಿಸಿದರು.