ಚಿಕ್ಕೋಡಿ (ಬೆಳಗಾವಿ) :ಆಪರೇಷನ್ ಹಸ್ತ ಮಾಡುವವರು ಮತ್ತು ಆಪರೇಷನ್ ಹಸ್ತಕ್ಕೆ ಒಳಗಾಗುವವರು ಮೂರ್ಖರು. ಆಪರೇಷನ್ ಹಸ್ತ ನಡೆಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆಪರೇಷನ್ ಕಮಲ ಮಾಡಿದಾಗ ಒಂದು ಅರ್ಥ ಇತ್ತು. ಆಗ ಸರ್ಕಾರಕ್ಕೆ ಪೂರ್ಣ ಬಹುಮತ ಇರಲಿಲ್ಲ. ಬಿಜೆಪಿಯವರು ನಮಗೆ ಆಹ್ವಾನ ನೀಡಿರಲಿಲ್ಲ. ನಮ್ಮ ಸ್ವಂತ ನಿರ್ಣಯದಿಂದ ನಾವು ಬಿಜೆಪಿಗೆ ಹೋಗಿದ್ದೆವು. ಕಾಂಗ್ರೆಸ್ನಲ್ಲಿ ಆದ ಅನ್ಯಾಯದಿಂದ ಬೇಸತ್ತು ನಾವಾಗೇ ಹೊರಬಂದಿದ್ದೆವು. ಈಗ ಆಪರೇಷನ್ ಹಸ್ತ ಮಾಡುತ್ತಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಡಿಕೆಶಿ ವಿರುದ್ಧ ಜಾರಕಿಹೊಳಿ ವಾಗ್ದಾಳಿ :ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ. ಕಾಂಗ್ರೆಸ್ ಪಕ್ಷದ 25 ರಿಂದ 30 ಹಿರಿಯ ಶಾಸಕರು ಬಂಡಾಯದ ಬಾವುಟ ಹಾರಿಸಲು ಸಿದ್ದತೆ ನಡೆಸಿದ್ದರು. ಈ ಸಂಬಂಧ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಸಭೆ ನಡೆಸಲು ಮುಂದಾಗಿದ್ದರು. ಇದನ್ನು ಮರೆಮಾಚಲು ಆಪರೇಷನ್ ಹಸ್ತ ಎಂಬುದನ್ನು ಮುನ್ನಲೆಗೆ ತರಲಾಯಿತು. ಇದು ಮಹಾನಾಯಕನ ಕುತಂತ್ರ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವಿಷಯ ಹೊರ ಬಂದರೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಆಗುತ್ತದೆ ಎಂದು ನಾಟಕ ಮಾಡಿದ್ದಾರೆ. ಕಾಂಗ್ರೆಸ್ನ ಕೆಲ ಶಾಸಕರು ಸರ್ಕಾರದ ವಿರುದ್ಧ ಈಗಾಗಲೇ ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ವಾಗ್ದಾಳಿ ನಡೆಸಿದರು.