ಅಥಣಿ(ಬೆಳಗಾವಿ): ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ತಜ್ಞರನ್ನು ಸೇರಿಸಿ ವಿಶೇಷವಾಗಿ ವಿಶ್ಲೇಷಣೆ ಮಾಡಿಕೊಂಡು ಅಗ್ನಿಪಥ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಯುವಕರಿಗೆ ಈ ಯೋಜನೆ ವರದಾನವಾಗುತ್ತದೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.
ಅಥಣಿಯಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿರುದ್ಯೋಗ ಯುವಕರಿಗೆ ಯೋಜನೆಯಿಂದ ಅನುಕೂಲ ಆಗುತ್ತದೆ. ಕೇವಲ ನಾಲ್ಕು ವರ್ಷಗಳಲ್ಲಿ ದೇಶ ಸೇವೆ ಜೊತೆಗೆ ತಮ್ಮ ಆರ್ಥಿಕ ಸಮಸ್ಯೆಯನ್ನು ಹೋಗಲಾಡಿಸಲು ಯೋಜನೆ ಸಹಕಾರಿಯಾಗಲಿದೆ. ಯೋಜನೆಯ ಬಗ್ಗೆ ಯುವಕರಲ್ಲಿ ಹಾಗೂ ಹಳ್ಳಿಗಳಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೆಲವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು.
ನಾನು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿದಾಗ ಹಾಗೂ ರಸ್ತೆಯಲ್ಲಿ ಹೋಗುವ ಕಾಲೇಜ್ ಹುಡುಗರನ್ನು ಕರೆದು ಅಗ್ನಿಪಥ್ ಯೋಜನೆ ಬಗ್ಗೆ ಕೇಳುತ್ತಿದ್ದೇನೆ. ಅವರು ಉತ್ತಮ ಯೋಜನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ಎಂದರು.
ಇದನ್ನೂ ಓದಿ:ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೊಂದು, ಜನರಿ ಸಮಾನ್ಯರಿಗೊಂದು ಕಾನೂನಿಲ್ಲ: ಸಚಿವ ಆರಗ ಜ್ಞಾನೇಂದ್ರ
ಕೆಲವರು ಪರ-ವಿರೋಧ ಚರ್ಚೆಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ ನಾಯಕರು ಯೋಜನೆಯ ಬಗ್ಗೆ ಯುವಕರಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸುತ್ತಿದ್ದಾರೆ. ಕೆಲವು ಯುವಕರು ನಾಲ್ಕು ವರ್ಷ ಕೆಲಸ ಮಾಡಿ ತಿರುಗಿ ಮನೆಗೆ ಬರುತ್ತಾರೆ. ಇನ್ನೂ ಸೇವೆ ಮಾಡಬೇಕೆಂದು ಎನ್ನುವವರು ಸೇನೆಯಲ್ಲಿ ಮುಂದುವರಿಯುತ್ತಾರೆ. ಯೋಜನೆಯಿಂದ ಲಾಭವೇ ಹೊರತು ಯಾವುದೇ ನಷ್ಟವಿಲ್ಲವೆಂದು ಕುಮಟಳ್ಳಿ ಪ್ರತಿಕ್ರಿಯಿಸಿದರು.