ಅಥಣಿ: ಪಟ್ಟಣದಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿ ಹಲವಾರು ಮಾಹಿತಿ ಕೇಳಿ ಅಥಣಿ ಶಾಸಕರು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಬೇಸಿಗೆ ಸಂದರ್ಭದಲ್ಲಿ ವಿದ್ಯುತ್ ಸಮರ್ಥವಾಗಿ ನೀಡುವಂತೆ ಹಾಗೂ ಟ್ರಾನ್ಸ್ಫಾರ್ಮರ್ ನಿಗದಿತ ವೇಳೆಗೆ ಕೊಡುವಂತೆ ಮತ್ತು ರೈತರಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಥಣಿ ಶಾಸಕ ಮಹೇಶ ಕುಮಟಳ್ಳಿ ಮಾರ್ಗದರ್ಶನ ನೀಡಿದರು. ಬಹಳ ದಿನಗಳಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಬದಲಾವಣೆಗಾಗಿ ರೈತರಿಂದ ಹಣ ಪಡೆಯುತ್ತಾರೆ ಎಂಬ ಆರೋಪ ಕೇಳಿ ಬರುತ್ತಿದ್ದವು. ಆದರೆ, ಸದ್ಯ ಅಂತಹ ಆರೋಪಗಳು ಕಡಿಮೆಯಾಗಿವೆ. ನಮಗೂ ಕೂಡ ಸಂತಸ ತಂದಿದೆ ಎಂದರು.
ಹಲವು ಕಡೆ ಅಧಿಕಾರಿಗಳು ರೈತರಿಂದ ಹಣ ಪಡೆದ ಆರೋಪಗಳು ಕೇಳಿ ಬರುತ್ತಿವೆ. ಇನ್ನೊಮ್ಮೆ ರೈತರಿಂದ ಇಂತಹ ಆರೋಪಗಳು ಕೇಳಿ ಬಂದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು. ಕರ್ನಾಟಕ ಸರ್ಕಾರ ವಿದ್ಯುತ್ ಸರಬರಾಜು ಮಂಡಳಿಗಳ ಸಿಬ್ಬಂದಿಯ ಸಂಬಳ ಕಡಿತಗೊಳಿಸಿಲ್ಲ. ಸದ್ಯ ಮಳೆಗಾಲ ಸಮಯದಲ್ಲಿ ಮಳೆ, ಗಾಳಿಯಿಂದ ವಿದ್ಯುತ್ ಕಂಬಗಳು ಉರುಳುವ ಮತ್ತು ಗಿಡಮರಗಳು ಬೀಳುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಮಹೇಶ ಕುಮಟಳ್ಳಿ ಹೇಳಿದರು.
ಈ ವೇಳೆ ವಿವಿಧ ಸೆಕ್ಷನ್ ಅಧಿಕಾರಿಗಳ ಜೊತೆ ಮಾಹಿತಿ ವಿನಿಮಯ ಮಾಡಿಕೊಂಡ ಮಹೇಶ ಕುಮಟಳ್ಳಿ ರೈತರು ಜತೆಗೆ ತಕರಾರು ತೆಗೆಯದಂತೆ ಕೆಲಸ ನಿರ್ವಹಿಸಬೇಕು. ಒಂದು ವೇಳೆ ಕರ್ತವ್ಯ ನಿರ್ವಹಣೆಗೆ ಅಡ್ಡಿ ಆತಂಕಗಳು ಎದುರಾದಲ್ಲಿ ನಮ್ಮ ಗಮನಕ್ಕೆ ತರಬೇಕು ಎಂದರು.