ಬೆಳಗಾವಿ : ಕೇಂದ್ರ ಸರ್ಕಾರ ಇಂದು ಮಂಡಿಸಿರುವ ಬಜೆಟ್ ಬಡವರ ಬೆನ್ನಿಗೆ ಚಿನ್ನದ ಚೂರಿ ಹಾಕಿದಂತಿದೆ ಎಂದು ಶಾಸಕಿ, ಕೆಪಿಸಿಸಿ ವಕ್ತಾರೆ ಲಕ್ಷ್ಮಿ ಹೆಬ್ಬಾಳ್ಕರ್ ಲೇವಡಿ ಮಾಡಿದ್ದಾರೆ.
ಬಡವರು ಬಳಸುವ ಬಹುತೇಕ ಉತ್ಪನ್ನಗಳ ಮೇಲೆ ಸೆಸ್ ವಿಧಿಸಲಾಗಿದೆ. ಕೊರೊನಾದಿಂದ ಕಂಗೆಟ್ಟಿರುವ ರೈತರು, ಜನಸಾಮಾನ್ಯರಿಗೆ ವಿಶೇಷ ಪ್ಯಾಕೇಜ್ ಏನನ್ನಾದರೂ ಘೋಷಿಸಬಹುದು. ಮುಳುಗಿರುವ ಬಡವರನ್ನು ಮೇಲೆತ್ತುವ ಯೋಜನೆ ಜಾರಿಗೊಳಿಸಬಹುದು ಎನ್ನುವ ನಿರೀಕ್ಷೆ ಇತ್ತು.
ಆದರೆ, ಈ ಹಿಂದೆ ಘೋಷಿಸಿದ್ದ 20 ಲಕ್ಷ ರೂ. ಕೃಷಿ ಪ್ಯಾಕೇಜ್ ಎನ್ನುವ ಕನ್ನಡಿಯೊಳಗಿನ ಗಂಟನ್ನು ಸಮದೂಗಿಸಲು ಈಗ ಪೆಟ್ರೋಲ್, ಡೀಸೆಲ್, ಧಾನ್ಯ, ರಸಗೊಬ್ಬರ, ಫಾಮ್ ಆಯಿಲ್ ಮೊದಲಾದ ಉತ್ಪನ್ನಗಳ ಮೇಲೆ ಸೆಸ್ ಹಾಕಲಾಗಿದೆ. ಇವೆಲ್ಲ ನೇರವಾಗಿ ಬಡವರ ಮೇಲಿನ ಗದಾಪ್ರಹಾರವಾಗಿದೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಬಡವರ ವಿರೋಧಿ ಸರ್ಕಾರ ಎನ್ನುವುದನ್ನು ಈ ಬಜೆಟ್ ಮತ್ತೊಮ್ಮೆ ಸಾಬೀತುಪಡಿಸಿದೆ. ಚಿನ್ನ, ಬೆಳ್ಳಿಯ ಮೇಲಿನ ಸೆಸ್ ಕಡಿಮೆ ಮಾಡುವ ಮೂಲಕ ಶ್ರೀಮಂತರ ನೆರವಿಗೆ ಸರ್ಕಾರ ಧಾವಿಸಿದಂತಿದೆ. ಬಂಡವಾಳ ಶಾಹಿಗಳ ಕೈಗೆ ದೇಶವನ್ನು ಕೊಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.