ಕೆಲವೊಬ್ಬರಿಗೆ ಕೆಲಸ ಇಲ್ಲದ್ದಕ್ಕೆ ಏನೇನೋ ಹೇಳಿಕೆ ನೀಡ್ತಾರೆ.. ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕ ಲಕ್ಷ್ಮಣ್ ಸವದಿ ವಾಗ್ದಾಳಿ ಚಿಕ್ಕೋಡಿ (ಬೆಳಗಾವಿ):ಡಿ ಕೆ ಶಿವಕುಮಾರ್ ಶೀಘ್ರದಲ್ಲೇ ಮಾಜಿ ಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಮಾಜಿ ಸಚಿವರಮೇಶ್ ಜಾರಕಿಹೊಳಿ ಹೇಳಿಕೆಗೆ ಅಥಣಿ ಶಾಸಕ ಲಕ್ಷ್ಮಣ ಸವದಿ ಟಾಂಗ್ ನೀಡಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವೊಬ್ಬರಿಗೆ ಮಾಡೋಕೆ ಕೆಲಸ ಇಲ್ಲದೇ ಇದ್ದಾಗ ಇಂಥಹ ಹೇಳಿಕೆ ನೀಡ್ತಾರೆ. ಮೈತುಂಬಾ ಕೆಲಸ ಇದ್ದರೆ ಏನು ನೆನಪು ಆಗುವುದಿಲ್ಲ. ಕೆಲಸ ಇಲ್ಲದ ಸಮಯದಲ್ಲಿ ಇಂಥ ವಿಚಾರಗಳು ನೆನಪಿಗೆ ಬರುತ್ತವೆ. ಇಂಥ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.
ವಿಜಯಪುರಕ್ಕೆ ಬಸವೇಶ್ವರ ಜಿಲ್ಲೆ ಎಂಬ ಮರುನಾಮಕರಣ ವಿಚಾರ ಬಗ್ಗೆ ಮಾತನಾಡಿ, ವಿಜಯಪುರ ಜಿಲ್ಲೆಗೆ ಮರುನಾಮಕರಣ ಮಾಡಿದರೆ ಒಳ್ಳೆಯದು. ಸಚಿವ ಎಂ ಬಿ ಪಾಟೀಲ್ ಅವರ ಕಾಲದಲ್ಲಿ ಹೊಸ ಅಧ್ಯಾಯ ಬರೆಯಲಿ ಎಂದರು.
ಪ್ರತ್ಯೇಕ ಉತ್ತರ ಕರ್ನಾಟಕ ಬೇಡಿಕೆಗೆ ನನ್ನ ಬೆಂಬಲವಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಕುಂಠಿತವಾಗಬಾರದು. ಇಡೀ ರಾಜ್ಯವನ್ನು ಸಮನಾಗಿ ನೋಡುವುದು ಸಿಎಂ ಹಾಗೂ ಎಲ್ಲ ಮಂತ್ರಿಗಳ ಕರ್ತವ್ಯ, ಅದು ನನ್ನ ಬಯಕೆಯಾಗಿದೆ. ಉತ್ತರ ಕರ್ನಾಟಕ ಬೇರೆ ಆಗುವುದು ಇವತ್ತಿಗೆ ಅಪ್ರಸ್ತುತ ಎಂದು ಸವದಿ ಹೇಳಿದರು.
ರಾಜ್ಯೋತ್ಸವ ದಿನ ಕರಾಳ ದಿನ ಆಚರಣೆಗೆ ಬೆಂಬಲ ಸೂಚಿಸಿದ ಮಹಾರಾಷ್ಟ್ರ ಸಿಎಂ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸವದಿ, ಅಲ್ಲಿನ ಯಾವ ಪ್ರತಿನಿಧಿ ಬರುತ್ತಾರೆ ಬರಲಿ. ಕರ್ನಾಟಕ ರಾಜ್ಯೋತ್ಸವದಲ್ಲಿ ಭಾಗಿಯಾಗಲಿ. ಕನ್ನಡ ಹಬ್ಬವನ್ನು ಆಚರಿಸಿ ಸಂತೋಷಪಡುವುದಾದರೆ ಬರಲಿ ಎಂದು ಸಿಎಂ ಏಕನಾಥ ಶಿಂಧೆಗೆ ತಿರುಗೇಟು ನೀಡಿದರು.
ಇದನ್ನೂಓದಿ:ಬರದ ನೋವು ಬಳಸಿ ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ಬಿಜೆಪಿಯನ್ನು ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಜಾಗ್ರತೆಯಿಂದಿರಿ: ಸಿಎಂ