ಬೆಳಗಾವಿ:ಕಳೆದ ಎರಡು ವರ್ಷಗಳಿಂದ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸದ ಬಿಜೆಪಿಯವರು ಕಾರ್ಯಕಾರಿಣಿ ಸಭೆ ನಡೆಸುತ್ತಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಲೇವಡಿ ಮಾಡಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಉತ್ತರ ಕರ್ನಾಟಕ ಸತತ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದೆ. ರೈತರು ಸೇರಿದಂತೆ ಎಲ್ಲಾ ವರ್ಗದ ಜನರು ತುಂಬಾ ಸಂಕಷ್ಟದಲ್ಲಿದ್ದಾರೆ.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸುವರ್ಣ ಸೌಧವನ್ನು ಬಾರ್ & ರೆಸ್ಟೋರೆಂಟ್ ಮಾಡಿ ಎಂದು ವಾಟ್ಸಪ್‌ಗಳಲ್ಲಿ ಬರಹಗಳು ಹರಿದಾಡುತ್ತಿದ್ದು, ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ನಗೆಪಾಟಲಿಗೀಡಾಗಿದೆ. ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೆಯುತ್ತಿದ್ದು, ಅದನ್ನ ನಾನು ಸ್ವಾಗತಿಸಲ್ಲ, ಖಂಡಿಸೋದು ಇಲ್ಲ. ಅಧಿವೇಶನ ನಡೆಸಲು ಇವರಿಗೆ ಟೈಮ್ ಇಲ್ಲ, ಆದರೆ ಕಾರ್ಯಕಾರಿಣಿ ಸಭೆ ನಡೆಸುತ್ತಿದ್ದಾರೆ. ಇಡೀ ಮಂತ್ರಿ ಮಂಡಲವೇ ಗೊಂದಲದಲ್ಲಿದೆ ಎಂದರು.
ರಾಜ್ಯದಿಂದ ಆರಿಸಿ ಹೋದ ಸಂಸದರು ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ಈವರೆಗೂ ಎಷ್ಟು ನೆರೆ ಸಂತ್ರಸ್ತ ರೈತರಿಗೆ ಪರಿಹಾರ ಕೊಟ್ಟಿದಾರೆ ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. ಕಾರ್ಯಕಾರಿಣಿ ಸಭೆ ನಡೆಸಲಿ, ಅದಕ್ಕೂ ಮೊದಲು ಉತ್ತರ ಕರ್ನಾಟಕಕ್ಕೆ ಏನು ಕೊಟ್ಟಿದಾರೆ ಹೇಳಲಿ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ 330 ಕೆರೆ-ಕಟ್ಟೆಗಳು ಒಡೆದು ಹೋಗಿವೆ. ಪ್ರವಾಹದಿಂದ ಹಲವು ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿದರೆ ಕೋವಿಡ್ ಸಂಕಷ್ಟದಿಂದ ದುಡ್ಡಿಲ್ಲ ಅಂತಾರೆ. ಆದರೆ ಬೆಳಗಾವಿಯಲ್ಲಿ ಕಾರ್ಯಕಾರಿಣಿ ಸಭೆ ನಡೆಸಲು ದುಡ್ಡಿದೆಯಾ?, ಬಿಜೆಪಿಯವರು ಚುನಾವಣೆ ನಡೆಸಲು ಮಾತ್ರ ದುಡ್ಡು ಖರ್ಚು ಮಾಡ್ತಾರೆ. ಆದರೆ ರಾಜ್ಯದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.
ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಸ್ಪರ್ಧೆಗೆ ಕಾಂಗ್ರೆಸ್ ಪಕ್ಷದಿಂದ ಯಾರೂ ಮುಂದೆ ಬರುತ್ತಿಲ್ಲ ಎಂದರೆ ಆಭಾಸವಾಗುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ, ಬಹಳಷ್ಟು ಜನ ಆಕಾಂಕ್ಷಿಗಳಿದ್ದು, ಹೈಕಮಾಂಡ್ ಅಭ್ಯರ್ಥಿ ಆಯ್ಕೆ ಮಾಡುತ್ತೆ. ನನ್ನ ಸಹೋದರನ ಹೆಸರು ಮಾಧ್ಯಮಗಳಲ್ಲಿ ಬಂದಿದ್ದು ನೋಡಿದ್ದೇನೆ. ಕೆಲ ಕಾರ್ಯಕರ್ತರು, ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಹೈಕಮಾಂಡ್ ನೀಡಿದ ಆದೇಶವನ್ನು ನಾನು ಪಾಲಿಸುತ್ತೇನೆ ಎಂದರು.
ಓದಿ:ಇಂದು ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ