ಬೆಳಗಾವಿ: ಮೊದಲು ಎಲೆಕ್ಷನ್ ಆಗಲಿ, ಶಾಸಕರು ಆರಿಸಿ ಬರಲಿ, ಆಮೇಲೆ ಸಿಎಂ ಸ್ಥಾನಕ್ಕೆ ಪೈಪೋಟಿ ಮಾಡಲಿ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಸಂದರ್ಭದಲ್ಲಿ, ಯಾವುದಕ್ಕೋಸ್ಕರ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಮೊದಲು 224 ಕ್ಷೇತ್ರಗಳಲ್ಲಿ 115 ಎಂಎಲ್‌ಎ ಆರಿಸಿ ಬರಲಿ. ಬಳಿಕ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಆಗಬೇಕು. ಹೈಕಮಾಂಡ್ ಯಾರ ಹೆಸರನ್ನು ಸೂಚಿಸುತ್ತಾರೋ? ಶಾಸಕಾಂಗ ಸಭೆಯಲ್ಲಿ ಎಲ್ಲರೂ ಯಾರನ್ನು ನಾಯಕರೆಂದು ಒಪ್ಪಿಕೊಳ್ಳುತ್ತಾರೋ ಅಂಥವರು ಸಿಎಂ ಆಗ್ತಾರೆ ಎಂದು ತಮ್ಮದೇ ನಾಯಕರಿಗೆ ಟಾಂಗ್ ಕೊಟ್ಟರು.
ಸಿದ್ದರಾಮೋತ್ಸವಕ್ಕೆ ಮೂಲ ಕಾಂಗ್ರೆಸ್ಸಿಗರಿಂದ ಅಸಮಾಧಾನ ಪ್ರಶ್ನೆಗೆ ಉತ್ತರಿಸಿ, ಯಾರಿಗೂ ಅಸಮಾಧಾನ ಇಲ್ಲ. ಹಳೇ ಕಾಂಗ್ರೆಸ್ ಹೊಸ ಕಾಂಗ್ರೆಸ್ ಅಂತಾ ಇಲ್ವೇ ಇಲ್ಲ. ರಾಹುಲ್ ಗಾಂಧಿಯವರೇ ಮುಂಚೂಣಿಯಲ್ಲಿ ನಿಂತು ಮುಖ್ಯ ಅತಿಥಿಯಾಗಿ ಭಾಗಿಯಾಗುತ್ತಿದ್ದಾರೆ. ಇಡೀ ಕಾಂಗ್ರೆಸ್ ಪರಿವಾರ ಈ ಕಾರ್ಯಕ್ರಮ ನಡೆಸಿಕೊಡಲಿದೆ ಎಂದರು.
ಇದನ್ನೂ ಓದಿ:ಪಿಎಸ್ಐ ಹಗರಣ: ಮಂಪರು ಪರೀಕ್ಷೆಗೆ ಎಡಿಜಿಪಿ ಅಮೃತ್ ಪೌಲ್ ಅಸಮ್ಮತಿ
ಸಿದ್ದರಾಮೋತ್ಸವಕ್ಕೆ ಬೆಳಗಾವಿ ಜಿಲ್ಲೆಯಿಂದ ಕಾರ್ಯಕರ್ತರು ತೆರಳುವ ವಿಚಾರದ ಬಗ್ಗೆ ಮಾತನಾಡಿ, ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಈಗಾಗಲೇ ಒಂದು ಸುತ್ತಿನ ಸಭೆಯಾಗಿದೆ. ಪ್ರತಿಯೊಂದು ಕ್ಷೇತ್ರದಿಂದ ಎರಡು ಸಾವಿರ ಜನರು ಹೋಗುವ ನಿರೀಕ್ಷೆ ಇದೆ. ಯಾರಿಗಾದರೂ ಬಸ್ ಸೌಲಭ್ಯ ಸೇರಿ ಇತರೆ ಇತರೆ ಯಾವುದೇ ಸೌಲಭ್ಯದ ಅಗತ್ಯ ಇದ್ದರೆ ನನಗೆ ತಿಳಿಸಲಿ, ಇಡೀ ಜಿಲ್ಲೆಯ ಜವಾಬ್ದಾರಿ ತಗೆದುಕೊಳ್ಳಲು ಸಿದ್ಧ ಎಂದು ತಿಳಿಸಿದರು.