ಬೆಳಗಾವಿ: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ. ಜನಸಾಮಾನ್ಯರ ಬೆವರಿನ ದುಡ್ಡನ್ನು ವಾಪಸ್ ಪಡೆಯಲು ಬಿಜೆಪಿ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳ ಹಿಂದೆ ಅಡುಗೆ ಅನಿಲದ ಬೆಲೆ 20 ರೂ. ಏರಿಕೆ ಆಗಿದೆ. ಕಳೆದ ಒಂದು ವರ್ಷದಲ್ಲಿ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದೇಶದ ಜನರಿಗೆ ಇಪ್ಪತ್ತು ಲಕ್ಷ ಕೋಟಿ ರೂಪಾಯಿ ಕೊರೊನಾ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಅದನ್ನು ಪೂರ್ತಿ ಮಾಡಲಿಲ್ಲ. ಒಂದೆರಡು ಸಾವಿರ ಕೋಟಿ ಹಣವನ್ನು ಜನರಿಗೆ ಕೊಟ್ಟಿದೆ. ಅದರ ಹೊರೆ ಜನರ ಮೇಲೆಯೇ ಹಾಕಿ ಅವರ ಬೆವರಿನ ದುಡ್ಡನ್ನು ವಾಪಸ್ ಪಡೆಯಲು ಬೆಲೆ ಏರಿಕೆ ಮಾಡುತ್ತಿದೆ. ಹೀಗಾಗಿ ಜನರ ಸಂಕಷ್ಟ ದೂರ ಮಾಡುವ ಸಲುವಾಗಿ ಕಾಂಗ್ರೆಸ್ ಪಕ್ಷದಿಂದ ಬೀದಿಗಿಳಿದು ಹೋರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.