ಅಥಣಿ(ಬೆಳಗಾವಿ): ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಬಾರ್ಡ್ 25ರಲ್ಲಿ ಮಂಜೂರು ಮಾಡಲಾಗಿರುವ ಶಾಲಾ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಭೂಮಿ ಪೂಜೆ ನೆರವೇರಿಸಿದರು. ಜೊತೆಗೆ ಸುಟ್ಟಟ್ಟಿ ಗ್ರಾಮದಲ್ಲಿ ನಾಲ್ಕು ಶಾಲೆ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿದರು.
ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಮಹೇಶ್ ಕುಮಟಳ್ಳಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಈಟಿವಿ ಭಾರತದ ಜೊತೆ ಅವರು ಮಾತನಾಡಿದರು. ಅಥಣಿ ತಹಶೀಲ್ದಾರ್ ನೆರೆ ಸಂತ್ರಸ್ತರ ಮೆಲೆ ಎಫ್ಐಆರ್ ದಾಖಲಿಸುತ್ತೇನೆ ಎಂದು ಹೇಳಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಪ್ರತಿಕ್ರಿಯೆ ನೀಡಿ, ಉನ್ನತ ಸ್ಥಾನದಲ್ಲಿರುವವರು ಸಂಯಮದಿಂದ ಮಾತನಾಡಬೇಕು. ನೆರೆ ಸಂತ್ರಸ್ತರು ಪರಿಹಾರಕ್ಕಾಗಿ ಕೆಲವು ಕಡೆ ಅಧಿಕಾರಿಗಳನ್ನು ಆಗ್ರಹಿಸುತ್ತಾರೆ. ಅದಕ್ಕೆ ಅಧಿಕಾರಿಗಳು ಕಠೋರವಾಗಿ ವರ್ತಿಸುವುದು ಸರಿಯಲ್ಲ. ಅವರೊಂದಿಗೆ ನಾನು ಮಾತನಾಡುತ್ತೇನೆ ಎಂದರು.
ಮಂಗಳವಾರ ಸಿಎಂ ಯಡಿಯೂರಪ್ಪನವರು ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ಬಾಧಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಕೆಲವು ತಾಂತ್ರಿಕ ದೋಷಗಳಿಂದ ಕಳೆ ಬಾರಿ ಪ್ರವಾಹಕ್ಕೆ ಹಾನಿಗೀಡಾದ ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡುವಲ್ಲಿ ವಿಳಂಬವಾಗಿದೆ. ಹಾಗೇ ಈ ಬಾರಿ ಅಪಾರ ಬೆಳೆ ಹಾನಿ ಸಂಭವಿಸಿದೆ. ಅವೆಲ್ಲವನ್ನು ಡಿಸಿಎಂ ಲಕ್ಷ್ಮಣ ಸವದಿ ಹಾಗೂ ನಾನು ಜೊತೆಯಾಗಿ ಅವರ ಗಮನಕ್ಕೆ ತರುತ್ತೇವೆ ಹಾಗೂ ಅಥಣಿ ಹೆಚ್ಚುವರಿ ಬೆಳೆ ಪರಿಹಾರಕ್ಕೆ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಅಥಣಿ ತಾಲೂಕಿನಲ್ಲಿ ಕೆಲವು ಕೆಎಂಎಫ್ ಸೊಸೈಟಿಗಳು ರೈತರ ಸುಲಿಗೆ ಮಾಡುತ್ತಿವೆ ಎಂಬುದು ನನ್ನ ಗಮನಕ್ಕೆ ಈಗ ಬಂದಿದೆ. ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ ಎಂದರು. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರು ಈ ಭಾಗಕ್ಕೆ 1600 ಕೋಟಿ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಅಥಣಿ ಮೇಲೆ ವಿಶೇಷ ಪ್ರೀತಿ ವ್ಯಕ್ತಪಡಿಸಿದ್ದಾರೆ. ಬಹುದಿನಗಳ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. ನಮ್ಮ ಗುರಿ ಅಥಣಿ ಅಭಿವೃದ್ಧಿ ಕಡೆ ಎಂದರು.