ಚಿಕ್ಕೋಡಿ (ಬೆಳಗಾವಿ): ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಅವರ ಸ್ಥಳಕ್ಕೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಎನ್.ಬಿ. ಗೆಜ್ಜೆ ಅವರನ್ನು ನೇಮಕ ಮಾಡಬೇಕೆಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಬೆಳಗಾವಿಯ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಸರ್ಕಾರದ ಸಚಿವಾಲಯದ ಸಿಬ್ಬಂದಿಯಾಗಿದ್ದು ಇವರನ್ನು ಮರಳಿ ಮಾತೃ ಇಲಾಖೆಗೆ ಹಿಂದುರುಗಿಸಿ ಇವರ ಸ್ಥಳಕ್ಕೆ ಎನ್.ಬಿ. ಗೆಜ್ಜೆ ಇವರನ್ನು ರಾಯಬಾಗ ತಹಶೀಲ್ದಾರ ಗ್ರೇಡ್ -1 ಹುದ್ದೆಗೆ ವರ್ಗಾವಣೆ ಮಾಡಬೇಕೆಂದು ಸಿಎಂಗೆ ಪತ್ರ ಬರೆದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕಂಕಣವಾಡಿ ಪಟ್ಟಣದ ಗೈರಾಣ ಜಮೀನಿನಲ್ಲಿ ವಾಸಿಸುತ್ತಿದ್ದ 150 ಜನರ ಮೇಲೆ ರಾಯಬಾಗ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಸರ್ಕಾರಿ ಜಾಗ ಅತಿಕ್ರಮಣ, ಅನಧಿಕೃತ ವಾಣಿಜ್ಯ ಮಳಿಗೆಗಳ ನಿರ್ಮಾಣ ಹಾಗೂ ನಕಲಿ ದಾಖಲೆ ಸೃಷ್ಟಿ ಆರೋಪದಡಿ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಷ್ಟೇ ಅಲ್ಲದೆ ಶುಕ್ರವಾರದ ಒಳಗೆ ಸರ್ಕಾರಿ ಜಮೀನು ಖಾಲಿ ಮಾಡುವಂತೆ ಸೂಚನೆ ಕೂಡ ನೀಡಿದ್ದರು. ಆದರೆ, ಈ ಯಾವುದೇ ವಿಚಾರಗಳನ್ನು ಶಾಸಕ ದುರ್ಯೋಧನ ಐಹೊಳೆ ಗಮನಕ್ಕೆ ತರದೆ ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದ್ದು, ಶಾಸಕ ದುರ್ಯೋಧನ ಐಹೊಳೆ ಹಾಲಿ ತಹಶೀಲ್ದಾರರನ್ನು ಎತ್ತಂಗಡಿ ಮಾಡಿ ಅವರ ಸ್ಥಾನಕ್ಕೆ ಎನ್.ಬಿ. ಗೆಜ್ಜೆಯವರನ್ನು ನೇಮಕ ಮಾಡುವಂತೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಈಗ ಕಂಕಣವಾಡಿ ಗೈರಾಣ ಜಾಗ ವಿವಾದಕ್ಕೆ ರಾಯಬಾಗ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಅವರ ವರ್ಗಾವಣೆಗೆ ಶಾಸಕರು ಮುಂದಾದರಾ ಎಂಬ ಪ್ರಶ್ನೆ ಸಹ ಎದ್ದಿದೆ.