ಬೆಳಗಾವಿ : ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೂಂಡಾಗಿರಿ ಮಾಡ್ತಿದ್ದರು. ಈಗ ಅವರ ನಡೆ ನುಡಿ ನೋಡಿದ್ರೆ ಭಯ ಬರುತ್ತೆ. ಅಂಥವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದೂರು ನೀಡಿದ್ದಾರೆ. ಡಿ. ಕೆ ಶಿವಕುಮಾರ್ ನಡವಳಿಕೆ ನೋಡಿದರೆ ಈಗಲೇ ಜನರಿಗೆ ಭಯದ ವಾತಾವರಣ ಇದೆ. ಇನ್ನು ಅವರು ಮುಖ್ಯಮಂತ್ರಿ ಆದರೆ ಗತಿ ಏನು? ಇಂಥವರಿಗೆ ಅಮಿತ್ ಶಾ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಜೈಲಿಗೆ ಹೋಗಿದ್ದು ಯಾಕೆ? ಅವರು ಸ್ವಾತಂತ್ರ್ಯ ಹೋರಾಟ ಮಾಡಿದ್ರಾ? ಮೇಕೆದಾಟಿಗಾಗಿ ಹೋರಾಟ ಮಾಡಿ ಜೈಲಿಗೆ ಹೋಗಿದ್ರಾ? ಲೂಟಿ ಮಾಡಿದ್ದರು, ಹೀಗಾಗಿ ಅವರನ್ನು ಜೈಲಿಗೆ ಹಾಕಿದ್ದರು. ಬಿಜೆಪಿಯ ಅನೇಕರ ಮೇಲೂ ಐಟಿ ರೇಡ್ ಆಗಿದೆ. ಬಿಜೆಪಿ, ಕಾಂಗ್ರೆಸ್ ಇರಲಿ ಅಥವಾ ಅತ್ಯಂತ ಪ್ರಾಮಾಣಿಕ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮನೆತನವೇ ಆಗಿರಲಿ. ಯಾರೇ ಭ್ರಷ್ಟಾಚಾರ ಮಾಡಿದರೂ ಪ್ರಧಾನಿ ಮೋದಿಯವರು ಬಿಡುವುದಿಲ್ಲ ಎಂದು ತಿರುಗೇಟು ಕೊಟ್ಟರು.
ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿಯವರಿಗೆ ಅಥಣಿಯಲ್ಲಿ ಲಕ್ಷ್ಮಣ ಸವದಿಯನ್ನು ಸೋಲಿಸುವ ಜವಾಬ್ದಾರಿಯನ್ನು ಕೊಟ್ಟಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಇಡೀ ಕರ್ನಾಟಕದಲ್ಲಿ ಪ್ರಚಾರವನ್ನು ಮಾಡುತ್ತಿದ್ದೇವೆ. ಒಬ್ಬ ವ್ಯಕ್ತಿಯ ಪರವಾಗಿ ನಮ್ಮನ್ನು ಅಪಾಯಿಂಟ್ಮೆಂಟ್ ಮಾಡಿಲ್ಲ. ಹಾಗಿದ್ರೆ ಅಥಣಿ ಇನ್ಚಾರ್ಜ್ ಕೊಟ್ಟು ಅಲ್ಲಿಯೇ ಕೂರಿಸುತ್ತಿದ್ದರು. ಕಳೆದ ಬಾರಿ ಬೈ ಎಲೆಕ್ಷನ್ನಲ್ಲಿ ಮಹೇಶ್ ಕುಮಟಳ್ಳಿ ಬಗ್ಗೆ ಕಾಂಗ್ರೆಸ್ನವರು ಹೀನಾಯವಾಗಿ ಮಾತನಾಡುತ್ತಿದ್ದರು. ಹಿಂದೂಗಳ ಬಗ್ಗೆ ಅವಹೇಳನ, ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡಿದ್ದರು ಎಂದು ಆರೋಪಿಸಿದರು.
ಬಿಜೆಪಿ ಎಂದರೆ ದಲಿತ ಮತ್ತು ಮೀಸಲಾತಿ ವಿರೋಧಿ ಎಂಬ ಹಣೆಪಟ್ಟಿಯನ್ನು ವಿಪಕ್ಷಗಳು ಕಟ್ಟಿದ್ದವು. ಹಾಲುಮತ ಎಸ್ಟಿಗೆ ಸೇರಿಸುವ ನಿಟ್ಟಿನಲ್ಲಿ ನಾನು ಹೋರಾಟ ಮಾಡಿದ್ದೆ. ಅದೇ ರೀತಿ ತಳವಾರ, ಹಡಪದ ಸೇರಿ ಸಣ್ಣಸಣ್ಣ ಸಮಾಜಗಳ ಪರವಾಗಿಯೂ ಧ್ವನಿ ಎತ್ತಿದ್ದೆ. ಈಗ ಪಂಚಮಸಾಲಿಗರಿಗೆ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಅಸಂವಿಧಾನಾತ್ಮಕವಾಗಿ ಮುಸ್ಲಿಂರಿಗೆ ನೀಡಿದ್ದ 2ಬಿ ಮೀಸಲಾತಿ ರದ್ದುಪಡಿಸಿ ಅವರಿಗೆ ಇಡಬ್ಲುಎಸ್ ನಲ್ಲಿ ಅವಕಾಶ ನೀಡಲಾಗಿದೆ. ಎಲ್ಲ ಸಮುದಾಯಗಳಿಗೆ ಬಿಜೆಪಿ ಸರ್ಕಾರ ಮೀಸಲಾತಿ ನೀಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದೆ ಎಂದು ಸಮರ್ಥಿಸಿಕೊಂಡರು.