ಬೆಳಗಾವಿ: "ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪಾಕಿಸ್ತಾನ ಸರ್ಕಾರ ಬಂದ ಹಾಗೆ ಆಗಿದೆ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಕುರಿತು ಪ್ರತಿಕ್ರಿಯಿಸಿದ ಅವರು, "ಎಂಎಲ್‌ಸಿ ಆಗಿರುವ ಸಚಿವರ ಸಹೋದರನ ಮೇಲೆ ಆರೋಪ ಕೇಳಿ ಬಂದಿದೆ. ಇದರ ಬಗ್ಗೆ ತನಿಖೆ ಆಗಬೇಕು. ಬಿಜೆಪಿ ಕಾರ್ತಕರ್ತರು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಲ್ಲೆಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಬಂದ ಮೇಲೆ ಪಾಕಿಸ್ತಾನದ ಸರ್ಕಾರ ಬಂದ ಹಾಗೆ ಆಗಿದೆ. ಸರ್ಕಾರ ಇದೇ ರೀತಿ ಉದ್ಧಟತನ ಪ್ರದರ್ಶಿಸಿದರೆ ಲೋಕಸಭೆ ಚುನವಾಣೆಯಲ್ಲಿ 28 ಸ್ಥಾನಗಳನ್ನು ಬಿಜೆಪಿ ಅತೀ ಹೆಚ್ಚು ಮತಗಳಿಂದ ಗೆಲ್ಲುತ್ತದೆ" ಎಂದರು.
"ಹಲ್ಲೆ ಸಂಬಂಧ ದಾಖಲೆಗಳು ಇದ್ದರೂ ಪೊಲೀಸರು ಏಕೆ ಕ್ರಮ ತಗೆದುಕೊಳ್ಳುತ್ತಿಲ್ಲ. ಪೊಲೀಸರು ಇಲ್ಲಿನ ಮೇಡಂ ಕೈಗೊಂಬೆ ಆಗಿದ್ದಾರೆ. ದೆಹಲಿ ಮೇಡಂ, ಬೆಳಗಾವಿ ಮೇಡಂ ಎಂಬ ಇಬ್ಬರು ಮೇಡಂಗಳು ಇದ್ದಾರೆ. ಬೆಳಗಾವಿಯಲ್ಲಿ ಏನು ಗೂಂಡಾಗಿರಿ ಪ್ರಾರಂಭ ಮಾಡಿದ್ದಾರೆ, ಅವರ ಅಂತ್ಯ ಆರಂಭವಾಗಿದೆ ಎಂದು ಅವರು ತಿಳಿದುಕೊಳ್ಳಬೇಕು" ಎಂದು ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರ ಯಾರೇ ಮಾಡಿದರೂ ಕ್ರಮ ಆಗಬೇಕು:ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈವಿಜಯೇಂದ್ರ ಸಂಬಂಧಿ ಮೇಲೆ ಲೋಕಾಯುಕ್ತ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, "ಭ್ರಷ್ಟಾಚಾರವನ್ನು ಯಾವ ಪಕ್ಷದವರು ಮಾಡಿದರೂ ಕ್ರಮ ಆಗಬೇಕು. ಭ್ರಷ್ಟಾಚಾರ ಮಾಡಿದವರನ್ನೇ ನಾಯಕರನ್ನಾಗಿ ಮಾಡಿದರೆ ಪ್ರಾಮಾಣಿಕರು ಹೇಗೆ ಇರಲು ಸಾಧ್ಯ?. ಉಮೇಶ್ ಕಂಡಕ್ಟರ್ ಯಾರು ಅಂತ ಗೊತ್ತಿಲ್ವಾ. ಅವರ ಮನೆಯಲ್ಲಿ ಎರಡು ನೋಟ್ ಕೌಂಟಿಂಗ್ ಯಂತ್ರ ಸಿಕ್ಕಿದ್ದು ಗೊತ್ತಿಲ್ವಾ?. ಅವನ ಬಳಿ ಸಾವಿರಾರು ಕೋಟಿ ಹೇಗೆ ಬಂತು. ಎರಡು ನೋಟು ಎಣಿಕೆ ಯಂತ್ರ ಏಕಿತ್ತು? ಅನ್ನೋದರ ಕುರಿತು ತನಿಖೆಯಾಗಬೇಕು. ಈ ಹಣಕ್ಕೆ ಸಂಬಂಧಪಟ್ಟವರನ್ನು ಬಂಧಿಸಬೇಕು" ಎಂದು ಯತ್ನಾಳ್ ಒತ್ತಾಯಿಸಿದರು.