ಬೆಳಗಾವಿ:ಹೈಕಮಾಂಡ್ ನಿರ್ಧಾರಕ್ಕೆ ಮುಖ್ಯಮಂತ್ರಿಗಳು ಒಪ್ಪುತ್ತಾರೆ, ನಾವೂ ಒಪ್ಪುತ್ತೇವೆ. ಇನ್ನೂ ಒಂದು ವಾರದಲ್ಲಿ ಏನೇನು ಆಗುತ್ತೆ ನೋಡೋಣ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ. ಅದರ ಬಗ್ಗೆ ನಾವೇನೂ ಹೇಳಕ್ಕಾಗಲ್ಲ. ಸಿಎಂ, ಹೈಕಮಾಂಡ್ ಇದರ ಬಗ್ಗೆ ನಿರ್ಧಾರ ತಗೆದುಕೊಳ್ಳಬೇಕು. ಮಾಧ್ಯಮಗಳಲ್ಲಿ ಏನು ಬರ್ತಿದೆಯೋ ಅದು ಸೂಕ್ತ ಅಲ್ಲ. ನಾವು ಎಲ್ಲಾ ಬೆಂಗಳೂರಿಗೆ ಹೋಗಿ ಸಿಎಂ ಭೇಟಿಯಾಗ್ತೇವೆ. ಆ ಸಂದರ್ಭದಲ್ಲಿ ಅನೇಕ ವಿಚಾರಗಳ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಡುತ್ತೇವೆ ಎಂದರು.
ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಮೊನ್ನೆ ಸಿಎಂ ಬಿ.ಎಸ್.ಯಡಿಯೂರಪ್ಪನವರೇ ದೆಹಲಿಗೆ ಹೋಗಿ ಬಂದಿದ್ದಾರೆ. ಸಿಎಂ, ಹೈಕಮಾಂಡ್ ಏನು ನಿರ್ಧಾರ ಕೈಗೊಳ್ತಾರೋ ಅದಕ್ಕೆ ನಾವೆಲ್ಲ ಒಪ್ಪಿಕೊಳ್ಳಬೇಕಾಗುತ್ತದೆ. ಶಾಸಕಾಂಗ ಪಕ್ಷದ ಸಭೆ ಕರೆದ ಬಗ್ಗೆ ನಮಗಿನ್ನೂ ಅಧಿಕೃತ ನೋಟಿಸ್ ಬಂದಿಲ್ಲ. ಸಭೆ ಕರೆದರೆ ನಾವು ಹೋಗುತ್ತೇವೆ ಎಂದರು.
ಇನ್ನು ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅದು ನನ್ನದಲ್ಲ ಎಂದು ಈಗಾಗಲೇ ನಳೀನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ. ಸಿಎಂಗೆ ಮನವಿ ಮಾಡಿ ತನಿಖೆಗೆ ಆಗ್ರಹಿಸುವುದಾಗಿಯೂ ಸಹ ಹೇಳಿದ್ದಾರೆ. ಹೀಗಾಗಿ ಅದರ ಬಗ್ಗೆ ಚರ್ಚೆ ಸೂಕ್ತವಲ್ಲ ಎಂದರು.
ಇದನ್ನೂ ಓದಿ: ಸಾಮಾನ್ಯರದ್ದಲ್ಲ, ಈ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ.. : ಡಿಕೆಶಿ