ಬೆಳಗಾವಿ: ಸಿಎಂ ಬದಲಾವಣೆಗೆ ಶಾಸಕರಿಂದ ಸಹಿ ಸಂಗ್ರಹ ಬಗ್ಗೆ ನನಗೆ ಗೊತ್ತಿಲ್ಲ. ಯಾರಾದರೂ ನನ್ನ ಹತ್ತಿರ ಸಹಿ ಕೇಳಲು ಬಂದ್ರೆ ನಾನು ಸಹಿ ಮಾಡಲ್ಲ ಎಂದು ಬಿಜೆಪಿ ಶಾಸಕ ಅನಿಲ್ ಬೆನಕೆ ಹೇಳಿದರು.
ಸಿ.ಪಿ. ಯೋಗೇಶ್ವರ್ ಕ್ಷೇತ್ರಕ್ಕೆ ಹೋಗುವ ಬದಲು ದೆಹಲಿಗೆ ಹೋಗಿದ್ದು ತಪ್ಪು: ಶಾಸಕ ಬೆನಕೆ
ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗಿನ ಹಿಂದೆನೇ ಶಾಸಕರ ಸಹಿ ಸಂಗ್ರಹ ಅಭಿಯಾನ ಕೂಡಾ ನಡೆದಿದೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಅನಿಲ್ ಬೆನಕೆ ತಮಗೇನೂ ಗೊತ್ತಿಲ್ಲ ಎಂಬಂತೆ ಉತ್ತರಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಇಂಥ ರಾಜಕೀಯ ಬೆಳವಣಿಗೆ ಸರಿಯಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಮುಖ್ಯಮಂತ್ರಿ ಬದಲಾವಣೆ ಅವಕಾಶ ಇಲ್ಲವೇ ಇಲ್ಲ. ಯಾರೂ ಸಹ ಇಂಥ ಪ್ರಯತ್ನ ಮಾಡಬಾರದು. ಸಿಎಂ ಬದಲಾವಣೆ ಬಗ್ಗೆ ನಮ್ಮಲ್ಲಿ ಚರ್ಚೆಯೇ ಇಲ್ಲ ಎಂದರು.
ಬಹಳ ದಿನಗಳಿಂದ ಸಹಿ ಸಂಗ್ರಹ ಬಗ್ಗೆ ಕೇಳುತ್ತಿದ್ದೇನೆ, ಆದರೆ ನನ್ನ ಹತ್ತಿರ ಯಾರೂ ಬಂದಿಲ್ಲ. ಈಗ ಕೋವಿಡ್ ಬಿಟ್ಟು ಏನೂ ತಲೆಯಲ್ಲಿಲ್ಲ, ಎರಡೆರಡು ಮಾಸ್ಕ್ ಹಾಕಿಕೊಂಡು ಅಡ್ಡಾಡಬೇಕಾಗಿದೆ. ಮನೆಯಿಂದ ಹೊರ ಬರೋಕೆ ಅಂಜಿಕೆ ಬರ್ತಿದೆ. ಸಿಎಂ ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ ಸಿ.ಪಿ.ಯೋಗೇಶ್ವರ್ ಮಾಡುವ ಕೆಲಸ ತಪ್ಪು. ಈ ಟೈಮ್‌ನಲ್ಲಿ ಸಿ.ಪಿ.ಯೋಗೇಶ್ವರ್ ಕ್ಷೇತ್ರಕ್ಕೆ ಹೋಗದೇ ದೆಹಲಿಗೆ ಹೋಗಿರುವುದು ತಪ್ಪು. ಕೋವಿಡ್ ನಿರ್ವಹಣೆಯ ಕೆಲಸವನ್ನು ಸಚಿವ ಸಿ.ಪಿ.ಯೋಗೇಶ್ವರ್ ಮಾಡಬೇಕು ಎಂದರು.