ಕರ್ನಾಟಕ

karnataka

ETV Bharat / state

ಬೆಳಗಾವಿ: ಮೂರು ದಿನಗಳ ಹಿಂದೆ ಆಟವಾಡುತ್ತ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಬಾಲಕಿ ಪತ್ತೆ - ಖಾನಾಪೂರ ತಾಲೂಕಿನ ಜಾಂಬೋಟಿ ಬಳಿಯ ಚಿರೇಖಾನಿ ಗ್ರಾಮದಲ್ಲಿ ಬಾಲಕಿ ನಾಪತ್ತೆ

ಖಾನಾಪೂರ ತಾಲೂಕಿನ ಜಾಂಬೋಟಿ ಬಳಿಯ ಚಿರೇಖಾನಿ ಗ್ರಾಮದಲ್ಲಿ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ ಬಾಲಕಿ ಪತ್ತೆಯಾಗಿಯಾಗಿದ್ದಾಳೆ.

missing-girl-found-after-three-days-in-belagavi
ಬೆಳಗಾವಿ: ಮೂರು ದಿನಗಳ ಹಿಂದೆ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಬಾಲಕಿ ಪತ್ತೆ

By

Published : Apr 30, 2022, 10:53 PM IST

Updated : May 2, 2022, 5:35 PM IST

ಬೆಳಗಾವಿ:ಕಳೆದ ಮೂರು ದಿನಗಳ ಹಿಂದೆ ಅರಣ್ಯ ಪ್ರದೇಶದ ಸಮೀಪದ ತನ್ನ ಅಜ್ಜಿಯ ಮನೆ ಬಳಿ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ ಮೂರು ವರ್ಷದ ಬಾಲಕಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯ ಖಾನಾಪೂರ ತಾಲೂಕಿನ ಜಾಂಬೋಟಿ ಬಳಿಯ ಚಿರೇಖಾನಿ ಗ್ರಾಮದಲ್ಲಿ ಘಟನೆ ನಡೆದಿದೆ.

ಏ.26ರಂದು ಚಿರೇಖಾನಿ ಗ್ರಾಮದ ತನ್ನ ಅಜ್ಜಿಯ ಮನೆಯ ಬಳಿ ಆಟವಾಡುತ್ತಿದ್ದ 3 ವರ್ಷದ ಬಾಲಕಿ ಆಕಸ್ಮಿಕವಾಗಿ ನಾಪತ್ತೆಯಾಗಿದ್ದಳು. ಶನಿವಾರ ಸಂಜೆ ಮನೆಯಿಂದ 2.5 ಕಿಲೋ ಮೀಟರ್​ ದೂರದ ದಟ್ಟ ಅರಣ್ಯದಲ್ಲಿ ಬಾಲಕಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಗ್ರಾಮದಲ್ಲಿನ ಕಾರ್ಯಕ್ರಮಕ್ಕೆ ಬಂದಿದ್ದರು:ತಾಲೂಕಿನ ತಾವರಗಟ್ಟಿ ಗ್ರಾಮದ ಶಿವಾಜಿ ಇಟಗೇಕರ ತಮ್ಮ ಪತ್ನಿ ಹಾಗೂ 3 ವರ್ಷ ವಯಸ್ಸಿನ ಪುತ್ರಿ ಅದಿತಿ ಜೊತೆ ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಚಿರೇಖಾನಿ ಗ್ರಾಮದ ತಮ್ಮ ಹೆಂಡತಿಯ ತವರುಮನೆಗೆ ಬಂದಿದ್ದರು. ಮಂಗಳವಾರ ಮಧ್ಯಾಹ್ನ ಚಿರೇಖಾನಿಯ ತನ್ನ ಅಜ್ಜಿಯ ಮನೆಯ ಬಳಿ ಆಟವಾಟುತ್ತಿದ್ದ ಬಾಲಕಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು.

ಅರಣ್ಯದಲ್ಲೇ ನಾಲ್ಕು ರಾತ್ರಿ:ಮಂಗಳವಾರ ಸಂಜೆ ಹಾಗೂ ಬುಧವಾರ, ಗುರುವಾರ ಇಡೀ ದಿನ ಚಿರೇಖಾನಿ ಗ್ರಾಮಸ್ಥರು ಮತ್ತು ಶಿವಾಜಿ ಕುಟುಂಬದ ಸದಸ್ಯರು ಬಾಲಕಿಗಾಗಿ ಸುತ್ತಮುತ್ತ ಹುಡುಕಾಟ ನಡೆಸಿದ್ದರು. ಆಕೆಯ ಬಗ್ಗೆ ಯಾವುದೇ ಸುಳಿವು ಸಿಗದಿದ್ದಾಗ ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಾಲಕಿಯು ಒಟ್ಟೂ ನಾಲ್ಕು ರಾತ್ರಿ ಕಾಡಿನಲ್ಲೇ ಕಳೆದಿದ್ದಳು.

ಇರುವೆ, ಚಿರಳೆಗಳು ಕಚ್ಚಿ ಗಾಯ: ದೂರು ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಪತ್ತೆಗಾಗಿ ಅರಣ್ಯ ಇಲಾಖೆಯ ನೆರವನ್ನು ಕೋರಿದ್ದರು. ಶುಕ್ರವಾರ ಮತ್ತು ಶನಿವಾರ ಅರಣ್ಯ ಇಲಾಖೆಯವರು ಚಿರೇಖಾನಿ, ಕೊಡುಗೈ ಮತ್ತು ಚಾಪೋಲಿ ಗ್ರಾಮದ ಯುವಕರ ನೆರವಿನೊಂದಿಗೆ ಶೋಧಕಾರ್ಯ ಕೈಗೊಂಡಿದ್ದರು. ಅದೃಷ್ಟವಶಾತ್ ಶನಿವಾರ ಸಂಜೆ ಬಾಲಕಿ ದಟ್ಟ ಅರಣ್ಯದಲ್ಲಿ ಮರವೊಂದರ ಕೆಳಗೆ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಕೈ-ಕಾಲುಗಳಿಗೆ ಇರುವೆ, ಚಿರಳೆಗಳು ಕಚ್ಚಿ ಗಾಯಗೊಳಿಸಿದ್ದರಿಂದ ಆಕೆ ನಡೆಯಲಾಗದ ಸ್ಥಿತಿಯಲ್ಲಿದ್ದಳು.

ಪ್ರಾಣಾಪಾಯದಿಂದ ಪಾರಾದ ಬಾಲಕಿ:ಕೂಡಲೇ ಆಕೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ವೈದ್ಯರ ಸೂಚನೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಸದ್ಯ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

'ಮೊಮ್ಮಗಳು ಆರಾಮಾಗಿದ್ದಾಳೆ': 'ಊರಲ್ಲಿ ಕಾರ್ಯಕ್ರಮ ಇರುವುದರಿಂದ ಮೊಮ್ಮಗಳು ಅಪ್ಪ-ಅಪ್ಪನೊಂದಿಗೆ ಬಂದಿದ್ದಳು. ಆದರೆ ಮನೆ ಬಳಿಯೇ ಆಟವಾಡುತ್ತಿದ್ದ ಮೊಮ್ಮಗಳು ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ನಂತರ ಮೂರು ದಿನ ನಾವು ಹುಡುಕಿದರೂ ಕಾಣಿಸಿರಲಿಲ್ಲ. ಬಳಿಕ ಕಾಡಿನಲ್ಲಿ ಸುಮಾರು ನಮ್ಮ ಮನೆಯಿಂದ ಸುಮಾರು 2.5 ಕಿ.ಮೀ ದೂರದಲ್ಲಿ ಪತ್ತೆಯಾಗಿದ್ದಾಳೆ. 5 ದಿನ ಹಾಗೂ ನಾಲ್ಕು ರಾತ್ರಿ ಕಾಡಿನಲ್ಲೇ ಇದ್ದಳು. ಈ ಸಂದರ್ಭದಲ್ಲಿ ಮೂರು ದಿನ ಆಗಾಗ ಮಳೆ ಕೂಡ ಆಗಿತ್ತು. ಈಗ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದ್ದು, ಸದ್ಯ ಯಾವುದೇ ತೊಂದರೆಯಿಲ್ಲ, ಆರಾಮಾಗಿದ್ದಾಳೆ' ಎಂದು ಬಾಲಕಿಯ ಅಜ್ಜ ಪಾಂಡುರಂಗ ಇಟಗೇಕರ ಹೇಳಿದ್ದಾರೆ. ಈ ಬಗ್ಗೆ ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಆ್ಯಸಿಡ್ ದಾಳಿ ಸಂತ್ರಸ್ತೆಯ ಆರೋಗ್ಯದಲ್ಲಿ ಸುಧಾರಣೆ ಬಳಿಕ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಚಿಂತನೆ: ಸಚಿವ ಸುಧಾಕರ್

Last Updated : May 2, 2022, 5:35 PM IST

ABOUT THE AUTHOR

...view details