ಬೆಳಗಾವಿ: ಪಠ್ಯ ಪುಸ್ತಕದಲ್ಲಿ ಬಣವಣ್ಣನವರ ಬಗ್ಗೆ ತಪ್ಪು ಮಾಹಿತಿ ಸೇರ್ಪಡೆ ಮಾಡಿದ್ದಕ್ಕೆ, ಬೆಳಗಾವಿಯ ಲಿಂಗಾಯತ ಮಠಾಧೀಶರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಮಠಾಧೀಶರು, ಡಿಸಿ ಮೂಲಕ ಶಿಕ್ಷಣ ಸಚಿವ ಬಿ.ಸಿ. ನಾಗೇಶಗೆ ಮನವಿ ಸಲ್ಲಿಸಿದರು.
9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬಸವಣ್ಣನವರ ಬಗ್ಗೆ ಉಲ್ಲೇಖಿಸಲಾಗಿದೆ. ಬಸವಣ್ಣನವರಿಗೆ ಉಪನಯನವಾದ ಬಳಿಕ ಕೂಡಲಸಂಗಮಕ್ಕೆ ನಡೆದರು ಎಂದು ತಪ್ಪಾಗಿ ಬರೆಯಲಾಗಿದೆ. ಶೈವ ಗುರು ಸಾನ್ನಿಧ್ಯದಲ್ಲಿ ಲಿಂಗದೀಕ್ಷೆ ಪಡೆದರು ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಬಸವಣ್ಣ ವೀರಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂದು ನಮೂದು ಮಾಡಲಾಗಿದೆ. ಆಗಿರುವ ತಪ್ಪನ್ನು ಕೂಡಲೇ ಸರಿಪಡಿಸಿ ಹೊಸ ಪಠ್ಯ ಮುದ್ರಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.