ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದ ಜತ್ತ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆತ: ಪ್ರಯಾಣಿಕರಿಗೆ ಗಾಯ - ಈಟಿವಿ ಭಾರತ ಕರ್ನಾಟಕ

ಮಹಾರಾಷ್ಟ್ರದ ಜತ್ತ ಪಟ್ಟಣದ ಸಮೀಪ ಕೆಲವು ದುಷ್ಕರ್ಮಿಗಳು ಕೆಎಸ್​ಆರ್‌ಟಿಸಿ ಬಸ್‌ಗೆ ಕಲ್ಲು ತೂರಿದ್ದಾರೆ.

ksrtc-bus-stone-pelted-near-jatta-in-maharashtra
ಮಹಾರಾಷ್ಟ್ರದ ಜತ್ತ ಬಳಿ KSRTC ಬಸ್ಸಿಗೆ ಕಲ್ಲೆಸೆತ: ಪ್ರಯಾಣಿಕರಿಗೆ ಗಾಯ

By ETV Bharat Karnataka Team

Published : Oct 31, 2023, 4:39 PM IST

Updated : Oct 31, 2023, 5:16 PM IST

ಕೆಎಸ್‌ಆರ್‌ಟಿಸಿ ಬಸ್‌ಮೇಲೆ ಕಲ್ಲು ತೂರಾಟ

ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಮತ್ತೊಂದೆಡೆ, ಮಹಾರಾಷ್ಟ್ರದ ಜತ್ತ ಪಟ್ಟಣದ ಸಮೀಪ ಕೆಲ ದುಷ್ಕರ್ಮಿಗಳು ಕೆಎಸ್​ಆರ್​ಟಿಸಿ ಬಸ್​ಗೆ ಕಲ್ಲು ತೂರಿರುವ ಘಟನೆ ನಡೆದಿದೆ. ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ವಿಜಯಪುರ ತಾಲೂಕಿನ ಇಂಡಿ ಘಟಕಕ್ಕೆ ಸೇರಿದ ಬಸ್​ ಇದಾಗಿದ್ದು, ಜತ್ತ ಪಟ್ಟಣದಿಂದ ವಿಜಯಪುರಕ್ಕೆ ತೆರಳುತ್ತಿತ್ತು.

ದುಷ್ಕರ್ಮಿಗಳು ಬಸ್​ ಅಡ್ಡಗಟ್ಟಿ ಕಲ್ಲು ತೂರಿದ್ದಾರೆ. ಬಸ್​ನ ಹಿಂಬದಿಯ ಗಾಜು ಪುಡಿಯಾಗಿದೆ. ಗಾಜಿನ ಚೂರುಗಳು ಪ್ರಯಾಣಿಕರಿಗೆ ತಾಗಿ ಗಾಯಗಳಾಗಿವೆ.

ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಇಂದು ಜತ್ತ ಪಟ್ಟಣ ಬಂದ್​ ಮಾಡಲಾಗಿದೆ. ಚಿಕ್ಕೋಡಿ ವಿಭಾಗದಿಂದ ಮಹಾರಾಷ್ಟ್ರದ ಕೊಲ್ಹಾಪುರ, ಸಾತಾರಾ, ಮುಂಬೈ, ವಿಶಾಲಗಡ್, ಇಚಲಕರಂಜಿ, ಮಿರಜ್ ಸೇರಿದಂತೆ ಇತರೆ ಭಾಗಗಳಿಗೆ ತೆರಳುವ ಕೆಎಸ್ಆರ್​ಟಿಸಿ ಬಸ್​ಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. NWKRTC ವಿಭಾಗದಿಂದ ಮಹಾರಾಷ್ಟ್ರಕ್ಕೆ ಪ್ರತಿನಿತ್ಯ ಸಂಚರಿಸುತ್ತಿದ್ದ 215ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಸದ್ಯ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದವರೆಗೆ ಮಾತ್ರ ಬಸ್‌ಗಳು ಸಂಚಾರ ಮಾಡುತ್ತಿವೆ. ಕೊಲ್ಹಾಪುರಕ್ಕೆ ತೆರಳುವ ಬಸ್‌ಗಳು ನಿಪ್ಪಾಣಿವರೆಗೆ, ಮಿರಜ್​ಗೆ ತೆರಳುವ ಬಸ್‌ಗಳು ಕಾಗವಾಡವರೆಗೆ, ಇಚಲಕರಂಜಿಗೆ ತೆರಳುವ ಬಸ್‌ಗಳು ಬೋರಗಾಂವವರೆಗೆ ಮಾತ್ರ ಸಂಚಾರ ಮಾಡಲಿವೆ ಎಂದು NWKRTC ಡಿಸಿ ಮಹಾದೇವ ಮುಂಜಿ ಮಾಹಿತಿ ನೀಡಿದರು.

ಮತ್ತೊಂದೆಡೆ, ಬೆಂಗಳೂರಿನಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್​ಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್ಆರ್​ಟಿಸಿ ತಿಳಿಸಿದೆ‌. ಬೆಂಗಳೂರಿನಿಂದ ಹೊರಡಬೇಕಿದ್ದ ಶಿರಡಿ, ಮುಂಬೈ, ಪುಣೆ ಬಸ್​ಗಳನ್ನು ರದ್ದುಗೊಳಿಸಲಾಗಿದೆ. ಇದನ್ನು ಪ್ರಯಾಣಿಕರು ಗಮನಿಸಬೇಕು ಎಂದು ಸಾರಿಗೆ ಸಂಸ್ಥೆ ಮನವಿ ಮಾಡಿದೆ.

ಕರ್ನಾಟಕದ ಬಸ್​ಗೆ ಬೆಂಕಿ:ಸೋಮವಾರ ಬೀದರ್​ ಜಿಲ್ಲೆಯ ಭಾಲ್ಕಿಯಿಂದ ಪುಣೆಗೆ ಹೊರಟಿದ್ದ ಕೆಎ-38 ಎಫ್-1201 ಸಂಖ್ಯೆ ಬಸ್‌ಗೆ ಮಹಾರಾಷ್ಟ್ರದ ಉಮರ್ಗಾ ಬಳಿಯ ತರುರಿ ಗ್ರಾಮದಲ್ಲಿ ಬೆಂಕಿ ಹಚ್ಚಲಾಗಿತ್ತು. ಪ್ರತಿಭಟನಾಕಾರರು ಬಸ್ ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಬೆಂಕಿ ಹಚ್ಚಿದ್ದರು. ತುಳಜಾಪುರ ಯಾತ್ರೆ ಸೇರಿದಂತೆ ಮಹಾರಾಷ್ಟ್ರಕ್ಕೆ ಅಂತರರಾಜ್ಯ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆಕೆಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ತಿಳಿಸಿದ್ದರು. ಸ್ಥಳೀಯ ಪೊಲೀಸರ ನೆರವಿನಿಂದ ಬಸ್​ನಲ್ಲಿದ್ದ 39 ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗಮ್ಯ ಸ್ಥಳಕ್ಕೆ ತೆರಳಲು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಕೆಎಸ್ಆರ್​ಟಿಸಿ ಬಸ್ ಸುಟ್ಟಿದ್ದು ತಪ್ಪು, ರಾಜ್ಯದ ಹಿತ ಕಾಯಲು ನಾವು ಬದ್ಧ: ಡಿ ಕೆ ಶಿವಕುಮಾರ್​​

Last Updated : Oct 31, 2023, 5:16 PM IST

ABOUT THE AUTHOR

...view details