ಬೆಳಗಾವಿ :ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಮನೆಗೆ ಸಚಿವರುಗಳಾದ ಜಗದೀಶ್ ಶೆಟ್ಟರ್, ಬೈರತಿ ಬಸವರಾಜ್, ಉಮೇಶ್ ಕತ್ತಿ ಅನಿರೀಕ್ಷಿತವಾಗಿ ಭೇಟಿ ನೀಡಿ ಅಚ್ಚರಿ ಮೂಡಿಸಿದರು.
ಲೋಕಸಭಾ ಉಪಚುನಾವಣೆ ಹಿನ್ನೆಲೆ ಗೋಕಾಕ್ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಚಿವರುಗಳು, ಲಖನ್ ಜಾರಕಿಹೊಳಿ ಮನೆಗೆ ಭೇಟಿ ನೀಡಿದರು. ಈ ವೇಳೆ ಸಚಿವರನ್ನು ಲಖನ್ ಆತ್ಮೀಯವಾಗಿ ಸ್ವಾಗತಿಸಿದರು. ಉಪಚುನಾವಣೆಯಲ್ಲಿ ಮಂಗಳಾ ಅಂಗಡಿ ಪರ ನಿಲ್ಲುವಂತೆ ಬಿಜೆಪಿಯ ನಾಯಕರು ಲಖನ್ ಜಾರಕಿಹೊಳಿಗೆ ಮನವಿ ಮಾಡಿದರು.
ಲಖನ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ ಸಚಿವರು ಓದಿ : ಯತ್ನಾಳ್‌ಗೆ ಮಾಡೋಕೆ ಕೆಲಸ ಇಲ್ಲ.. ಅವರ ಟೀಕೆಗಳಿಗೆಲ್ಲ ಉತ್ತರ ಕೊಡಲ್ಲ- ಕೃಷಿ ಸಚಿವ ಬಿ ಸಿ ಪಾಟೀಲ್
ಸಚಿವರು ಭೇಟಿ ನೀಡಿದ ಕೆಲವೇ ನಿಮಿಷಗಳ ಬಳಿಕ, ಮಂಗಳಾ ಅಂಗಡಿ ಹಾಗೂ ಅವರ ಪುತ್ರಿ ಶ್ರದ್ಧಾ ಶೆಟ್ಟರ್ ಕೂಡ ಲಖನ್ ನಿವಾಸಕ್ಕೆ ಭೆಟಿ ನೀಡಿ, ಉಪಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.
ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಲಖನ್ ಜಾರಕಿಹೊಳಿ ಆಗ್ರಹಿಸಿದ್ದರು. ಇದೀಗ ಬಿಜೆಪಿ ಸಚಿವರ ಭೇಟಿಯಿಂದ ಎರಡು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಕುತೂಹಲ ಮೂಡಿದೆ. ಲಖನ್ ಜಾರಕಿಹೊಳಿ ಬಿಜೆಪಿ ಪಕ್ಷದ ಕಡೆ ಮುಖ ಮಾಡುತ್ತಾರಾ ಎಂಬ ಅನುಮಾನ ಮೂಡಿದೆ.