ಬೆಳಗಾವಿ:ಕಾಂಗ್ರೆಸ್ನಲ್ಲಿ ಒಂದೆಡೆ ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಚರ್ಚೆ ಜೋರಾಗಿದ್ದರೆ. ಮತ್ತೊಂದೆಡೆ ಅತೀ ಹೆಚ್ಚು ಶಾಸಕರನ್ನು ಗೆಲ್ಲಿಸಿ ಕೊಟ್ಟಿರುವ ಬೆಳಗಾವಿ ಜಿಲ್ಲೆಗೆ ಈ ಬಾರಿ ಹೆಚ್ಚು ಸಚಿವ ಸ್ಥಾನ ಸಿಗುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ಲಕ್ಷ್ಮಣ ಸವದಿ, ದಿ. ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ ಮಂತ್ರಿಯಾಗಿದ್ದರು. ಯಡಿಯೂರಪ್ಪ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಸವದಿ, ಬೊಮ್ಮಾಯಿ ಸರ್ಕಾರದಲ್ಲಿ ಡಿಸಿಎಂ ಸ್ಥಾನದ ಜೊತೆಗೆ ಮಂತ್ರಿ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು.
ಇನ್ನು, ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಎಸ್ವೈ ಸಂಪುಟದಲ್ಲಿದ್ದ ಶ್ರೀಮಂತ ಪಾಟೀಲಗೆ ಬೊಮ್ಮಾಯಿ ಸರ್ಕಾರದಲ್ಲಿ ಕೋಕ್ ನೀಡಲಾಗಿತ್ತು. ಅದೇ ರೀತಿ ಉಮೇಶ್ ಕತ್ತಿಯವರ ಅಕಾಲಿಕ ನಿಧನದಿಂದ ಜಿಲ್ಲೆಗೆ ಮತ್ತೊಂದು ಸ್ಥಾನ ಕಡಿಮೆಯಾಗಿತ್ತು. ಶಶಿಕಲಾ ಜೊಲ್ಲೆ ಮಾತ್ರ ಪೂರ್ಣ ಅವಧಿಗೆ ಸಚಿವೆಯಾಗಿದ್ದರು. ಈಗ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ 135 ಸೀಟ್ ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲು ಸನ್ನದ್ಧವಾಗಿದೆ. ಇದರಲ್ಲಿ ಬೆಳಗಾವಿ ಕೊಡುಗೆ ಕೂಡ ಅಪಾರವಾಗಿದ್ದು, 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿದ್ದರೆ, ಬಿಜೆಪಿ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿ 13 ಬಿಜೆಪಿ, ಐವರು ಕಾಂಗ್ರೆಸ್ ಶಾಸಕರು ಗೆದ್ದು ಬಂದಿದ್ದರು.
ನಾಲ್ಕೈದು ಬಾರಿ ಆಯ್ಕೆಯಾದವರು, ಹ್ಯಾಟ್ರಿಕ್ ಗೆಲುವು ಕಂಡವರು ತಮಗೂ ಮಂತ್ರಿ ಸ್ಥಾನ ಸಿಗುತ್ತೆ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಅಲ್ಲದೇ ಈಗಿನಿಂದಲೇ ಮಂತ್ರಿ ಪದವಿಗಾಗಿ ಲಾಬಿ ಶುರುವಾಗಿದೆ. ಅದರಲ್ಲೂ ಪ್ರಕಾಶ್ ಹುಕ್ಕೇರಿ ಸತತ ಐದು ಬಾರಿ ಶಾಸಕರಾಗಿ, ಸಂಸದರಾಗಿ, ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದು, ತಮ್ಮ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ಕೇಳುವ ಸಾಧ್ಯತೆಯಿದೆ. ಈ ಹಿಂದೆ ಕೂಡ ಎರಡು ಬಾರಿ ಸಚಿವರಾಗಿರುವ ಪ್ರಕಾಶ್ ಹುಕ್ಕೇರಿ ತಮ್ಮ ಪುತ್ರ ಗಣೇಶ ಹುಕ್ಕೇರಿಯನ್ನು ಮೂರು ಬಾರಿ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಗೆಲ್ಲಿಸಿದ್ದು, ಈ ಬಾರಿ 78,509 ಮತಗಳ ಭಾರಿ ಅಂತರದಿಂದ ರಮೇಶ್ ಕತ್ತಿ ವಿರುದ್ಧ ಗಣೇಶ ಹುಕ್ಕೇರಿ ಗೆದ್ದು ಬೀಗಿದ್ದಾರೆ. ಹೀಗಾಗಿ ಪ್ರಕಾಶ್ ಹುಕ್ಕೇರಿ ತಮಗೆ ಅಥವಾ ತಮ್ಮ ಪುತ್ರನಿಗೆ ಮಂತ್ರಿ ಸ್ಥಾನ ನೀಡುವಂತೆ ಪಟ್ಟು ಹಿಡಿಯಲಿದ್ದಾರೆ.
ಬೆಳಗಾವಿ ಜಿಲ್ಲೆ ಕಾಂಗ್ರೆಸ್ ಮಾಸ್ಟರ್ ಮೈಂಡ್ ಸತೀಶ್ ಜಾರಕಿಹೊಳಿ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ 11 ಸ್ಥಾನ ಗೆಲ್ಲಿಸುವಲ್ಲಿ ಶ್ರಮಿಸಿದ್ದರು. ರಾಜ್ಯ ನಾಯಕರು ಪ್ರಚಾರಕ್ಕೆ ಅಷ್ಟಾಗಿ ಆಗಮಿಸದಿದ್ದರೂ ಪ್ರತಿ ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡು ಅಹಿಂದ ಮತಗಳನ್ನು ಕ್ರೋಢಿಕರಿಸಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಈ ಬಾರಿ ಸತೀಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಸಿಗುವುದು ಪಕ್ಕಾ ಎನ್ನಲಾಗುತ್ತಿದೆ.