ಕರ್ನಾಟಕ

karnataka

ETV Bharat / state

ಪರಿಷತ್​ನಲ್ಲಿ ಪ್ರತಿಧ್ವನಿಸಿದ ಜಮೀರ್ ಹೇಳಿಕೆ ವಿಚಾರ: ಬಿಜೆಪಿ ಸದಸ್ಯರಿಂದ ಧರಣಿ, ಸಭಾತ್ಯಾಗ - ಬಿಜೆಪಿ ಸದಸ್ಯರು ಸಭಾತ್ಯಾಗ

BJP members Walks out from Session: ಎರಡು ಬಾರಿ ಕಲಾಪ ಮುಂದೂಡಿದ ಬಸವರಾಜ ಹೊರಟ್ಟಿ ಅವರು ಎರಡು ಬಾರಿ ಸಭಾಪತಿ ಕೊಠಡಿಯಲ್ಲಿ ಸಂಧಾನಸಭೆ ನಡೆಸಿದರೂ, ಯಾವುದೇ ಸಕಾರಾತ್ಮಕ ಪ್ರಯೋಜನವಾಗಿಲ್ಲ.

Minister Zameer statement on Speaker post discussed in Council
ಪರಿಷತ್​ನಲ್ಲಿ ಪ್ರತಿಧ್ವನಿಸಿದ ಜಮೀರ್ ಹೇಳಿಕೆ ವಿಚಾರ: ಬಿಜೆಪಿ ಸದಸ್ಯರಿಂದ ಧರಣಿ, ಸಭಾತ್ಯಾಗ

By ETV Bharat Karnataka Team

Published : Dec 13, 2023, 6:38 PM IST

ಪರಿಷತ್​ನಲ್ಲಿ ಪ್ರತಿಧ್ವನಿಸಿದ ಜಮೀರ್ ಹೇಳಿಕೆ ವಿಚಾರ: ಬಿಜೆಪಿ ಸದಸ್ಯರಿಂದ ಧರಣಿ, ಸಭಾತ್ಯಾಗ

ಬೆಂಗಳೂರು/ಬೆಳಗಾವಿ:ಸ್ಪೀಕರ್​ ಹುದ್ದೆಯ ಕುರಿತು ಸಚಿವ ಜಮೀರ್ ಹೇಳಿಕೆ ನೀಡಿರುವ ವಿಷಯ ವಿಧಾನಪರಿಷತ್​ನಲ್ಲಿ ಪ್ರತಿಧ್ವನಿಸಿದ್ದು, ಜಮೀರ್ ಕ್ಷಮೆಯಾಚನೆಗೆ ಬಿಜೆಪಿ ಸದಸ್ಯರು ಬಿಗಿಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ಕಲಾಪ ಎರಡು ಬಾರಿ ಮುಂದೂಡಿಕೆಯಾಯಿತು. ಅಂತಿಮವಾಗಿ ಹಕ್ಕು ಬಾದ್ಯತಾ ಸಮಿತಿ ರಚನೆ ಬೇಡಿಕೆ ಮುಂದಿಟ್ಟಿದ್ದು, ಬೇಡಿಕೆ ತಳ್ಳಿಹಾಕಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಪರಿಷತ್ ಕಲಾಪಕ್ಕೆ ಸಚಿವ ಜಮೀರ್ ಅಹಮದ್ ಆಗಮಿಸಿದ್ದು, ಪ್ರಶ್ನೋತ್ತರ ಕಲಾಪದ ವೇಳೆ ಉತ್ತರ ನೀಡಲು ಎದ್ದು ನಿಲ್ಲುತ್ತಿದ್ದಂತೆ ಜಮೀರ್ ವಿರುದ್ಧ ಬಿಜೆಪಿ ಸದಸ್ಯರು ತಮ್ಮ ಸ್ಥಾನದಲ್ಲೇ ಎದ್ದು ನಿಂತು ಆಕ್ರೋಶ ವ್ಯಕ್ತಪಡಿಸಿದರು. ಜಮೀರ್​ ಕ್ಷಮೆ ಯಾಚನೆಗೆ ಪಟ್ಟು ಹಿಡಿದರು. ಬಿಜೆಪಿ ಸದಸ್ಯರ ಬೇಡಿಕೆ ತಳ್ಳಿಹಾಕಿದ ಸಭಾನಾಯಕ ಬೋಸರಾಜ್, ಈ ಸದನದ ಪೀಠಕ್ಕೆ ಜಮೀರ್ ಅಗೌರವ ತೋರಿಸಿಲ್ಲ ಎಂದು ತಿಳಿಸಿದರು.

ಸಭಾ ನಾಯಕ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ ಈ ಸದನಕ್ಕೆ ಸಂಬಂಧವಿಲ್ಲದ ವಿಷಯ ಅದು ಎಂದು ಹೇಳಿದ್ದಾರೆ. ಆದರೂ ಬಿಜೆಪಿ ಸದಸ್ಯರು ಸದನದಲ್ಲಿ ಗದ್ದಲ ಎಬ್ಬಿಸಿದರು. ತೀವ್ರ ಗದ್ದಲದ ನಡುವೆ ಕೂಡ ಪ್ರಶ್ನೋತ್ತರ ಕಲಾಪ ಮುಂದುವರೆಸಲಾಯಿತು. ಗದ್ದಲದ ನಡುವೆಯೂ ಉತ್ತರ ನೀಡಲು ಸಚಿವರು ನಿಂತರಾದರೂ ಉತ್ತರ ನೀಡಲು ಬಿಜೆಪಿ ಸದಸ್ಯರು ಬಿಡಲಿಲ್ಲ.

ಪೀಠಕ್ಕೆ ಧರ್ಮದ ಲೇಪನ ಮಾಡಿ ಆಭಾಸ ಮಾಡಿದ ಸಚಿವರ ಉತ್ತರ ನಮಗೆ ಬೇಡ, ಅವರು ತೆಲಂಗಾಣ ಮಂತ್ರಿಯಾ? ರಾಜ್ಯದ ಮಂತ್ರಿಯಾ? ನಾವು ಪೀಠಕ್ಕೆ ಕೈ ಮುಗಿಯೋದು ಹೊರತು ವ್ಯಕ್ತಿಗಲ್ಲ. ನಾವು ಜಂಟಿ ಅಧಿವೇಶನ ನಡೆದಾಗ ಕೆಳಮನೆಯಲ್ಲೂ ಪ್ರವೇಶ ಮಾಡುತ್ತೇವೆ. ಇದು ಈ ಸದನಕ್ಕೂ ಸಂಬಂಧಿಸಿದ ವಿಚಾರ ಎಂದು ಬಿಜೆಪಿ ಸದಸ್ಯರು ಸಚಿವ ಜಮೀರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸಿದರು. ಗದ್ದಲ ನಡೆಯುತ್ತಿದ್ದರೂ ಜಮೀರ್ ನೆರವಿಗೆ ಆಡಳಿತ ಪಕ್ಷದ ಸದಸ್ಯರು ಬಾರದಿದ್ದದ್ದು ಅಚ್ಚರಿ ಮೂಡಿಸಿತು. ಗದ್ದಲ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪರಿಷತ್ ಕಲಾಪವನ್ನು 10 ನಿಮಿಷ ಮುಂದೂಡಿಕೆ ಮಾಡಲಾಯಿತು.

ಸಭಾಪತಿ ಕೊಠಡಿಯಲ್ಲಿ ಸಂಧಾನ ಸಭೆ: ಜಮೀರ್ ಅಹಮದ್ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿನ ಗದ್ದಲ ತಿಳಿಗೊಳಿಸಲು ಸಭಾಪತಿ ಕೊಠಡಿಯಲ್ಲಿ ಸಂಧಾನ ಸಭೆ ನಡೆಸಲಾಯಿತು. ಮೇಲ್ಮನೆಯಲ್ಲಿ ಕೆಳಮನೆಯ ವಿಚಾರ ತರುವುದು ಬೇಡ ಎಂದು ಮನವೊಲಿಸಲು ಸಭಾಪತಿ ಪ್ರಯತ್ನ ನಡೆಸಿದರು. ಕೋಟ ಶ್ರೀನಿವಾಸ್ ಪೂಜಾರಿ, ಸಭಾ ನಾಯಕ ಭೋಸ್ ರಾಜು, ಎನ್ ರವಿಕುಮಾರ್ ಜೊತೆ ಸಭಾಪತಿ ಸಭೆ ನಡೆಸಿದರು.

ಸಭೆಯಿಂದ ವಾಪಸ್ ಆಗಿ ಸಮಾಲೋಚನೆ ನಡೆಸಿದ ಬಿಜೆಪಿ ಸದಸ್ಯರು ಧರಣಿ ವಾಪಸ್ ಪಡೆಯುವುದು ಬೇಡ ಎನ್ನುವ ಒಮ್ಮತದ ನಿರ್ಣಯಕ್ಕೆ ಬಂದರು. ಹಾಗಾಗಿ ಕಲಾಪ ಮರಳಿ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದರು. ಈ ವೇಳೆ, ಸದನಕ್ಕೆ ಸ್ಪಷ್ಟೀಕರಣ ನೀಡಿದ ಸಚಿವ ಜಮೀರ್ ಅಹಮದ್, ಪೀಠಕ್ಕೆ ನಾನು ಅಗೌರವ ತೋರಿಸಿಲ್ಲ, ಮುಂದೆಯೂ ಅಗೌರವ ತೋರಿಸಲ್ಲ. ಕರ್ನಾಟಕದಲ್ಲಿ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಸ್ಪೀಕರ್ ಸ್ಥಾ‌ನ ಕೊಟ್ಟಿದ್ದಾರೆ. ನನ್ನನ್ನು ಸೇರಿದಂತೆ ಎಲ್ಲರೂ ಪೀಠಕ್ಕೆ ನಮಸ್ಕಾರ ಮಾಡಬೇಕು ಎಂದು ಹೇಳಿದ್ದೇನೆ. 'ಸಲಾಂ ವಾಲೇಕು' ಎಂದು ಹೇಳಬೇಕು ಎಂದು ಹೇಳಿಲ್ಲ ನಾನು ಎಂದರು.

ಸಚಿವರ ಸ್ಪಷ್ಟೀಕರಣಕ್ಕೆ ಬಿಜೆಪಿ ಹಿರಿಯ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಆಕ್ಷೇಪಿಸಿ, ಸ್ಪೀಕರ್​ಗೆ ಬಿಜೆಪಿಯವರು ಸಲಾಂ ಸಾಭ್ ಎನ್ನುತ್ತಾರೆ ಎಂದು ಹೇಳಿದ್ದಾರೆ. ಹಾಗಾಗಿ ಪೀಠಕ್ಕೆ ಅವರು ಅಗೌರವ ತೋರಿದಂತೆಯೇ ಆಗಲಿದೆ ಎಂದರು. ಇದನ್ನು ಸಮರ್ಥಿಸಿದ ಬಿಜೆಪಿ ಸದಸ್ಯರು ಜಮೀರ್ ರಾಜೀನಾಮೆ ಕೊಡಲಿ ಎಂದು ಪಟ್ಟು ಹಿಡಿದರು.

ಈ ವೇಳೆ ಸದನದಲ್ಲಿ‌ ಗದ್ದಲ ಕೋಲಾಹಲ ಎದ್ದಿತು. ಎದ್ದು ನಿಂತು ಎಚ್ಚರಿಕೆ ಕೊಟ್ಟ ಸಭಾಪತಿ ಬಸವರಾಜ ಹೊರಟ್ಟಿ, ನೀವು ಇದೇ ರೀತಿ ಮಾಡಿದರೆ ನಾನು ಸದನವನ್ನು ಎರಡು ಘಂಟೆಗಳ ಕಾಲ ಮುಂದೂಡುತ್ತೇನೆ ಎಂದರು. ಪರಿಷತ್ ಕಲಾಪ ವೀಕ್ಷಿಸಲು ವಿದ್ಯಾರ್ಥಿಗಳು ಬಂದಿದ್ದಾರೆ. ಅವರ ಮುಂದೆ ಈ ರೀತಿ ಗದ್ದಲ ಮಾಡಿದರೆ ನಮ್ಮ ಮರ್ಯಾದೆ ಏನಾಗಬೇಕು. ಸುಗಮ ಕಲಾಪಕ್ಕೆ ಅವಕಾಶ ನೀಡಿ ಎಂದು ಸಭಾಪತಿ ಹೊರಟ್ಟಿ ಮನವಿ ಮಾಡಿದರು.

ಎರಡನೇ ಬಾರಿ ಸಭಾಪತಿ ಕೊಠಡಿಯಲ್ಲಿ ಸಂಧಾನ ಸಭೆ ನಡೆಸಲಾಯಿತು. ಆದರೆ, ಸಭಾಪತಿ ಕೊಠಡಿಯಲ್ಲಿ ನಡೆದ ಸಂಧಾನ ಸಭೆ ವಿಫಲವಾಯಿತು. ಸಚಿವ ಜಮೀರ ಅಹ್ಮದ್ ಕ್ಷಮೆಯಾಚಿಸಬೇಕು. ಇಲ್ಲ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಪಟ್ಟುಹಿಡಿಯಿತು. ವಿಧಾನ ಪರಿಷತ್ ಕಲಾಪ ಮತ್ತೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದರು. ಜಮೀರ್ ರಾಜೀನಾಮೆ ಕೊಡಬೇಕು ಅಥವಾ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.

ಹಕ್ಕು ಬಾದ್ಯತಾ ಸದನ ಸಮಿತಿ ರಚನೆ ಮಾಡಿ ಜಮೀರ್ ಮಾತು ಸರಿಯೋ ತಪ್ಪು ಎಂಬ ಬಗ್ಗೆ ಸದನ ಸಮಿತಿ ರಚನೆ ಮಾಡಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು, ಸಂವಿಧಾನಕ್ಕೆ ಅಪಮಾನ ಮಾಡಿದ ಜಮೀರ್​ಗೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಬಿಜೆಪಿ ಬೇಡಿಕೆ ತಳ್ಳಿಹಾಕಿದ ಹಿನ್ನೆಲೆಯಲ್ಲಿ ಘೋಷಣೆ ಕೂಗುತ್ತ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಇದನ್ನೂ ಓದಿ:ವಿದ್ಯಾರ್ಥಿ ವೇತನ ಪಾವತಿಗೆ ಆಯವ್ಯಯದಲ್ಲಿ 105 ಕೋಟಿ ಅನುದಾನ ನಿಗದಿ: ಶಿವರಾಜ ತಂಗಡಗಿ

ABOUT THE AUTHOR

...view details