ಬೆಳಗಾವಿ:ರಮೇಶ್ ಜಾರಕಿಹೊಳಿ ಅವರ ಸಿ.ಡಿ ಪ್ರಕರಣದಿಂದ ಆಗುತ್ತಿರುವ ಮುಜುಗರ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನಮಗೆ ನೀಡಿದ್ದಾನೆ ಎಂದು ಸಚಿವ ಉಮೇಶ ಕತ್ತಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣ ಎಸ್ಐಟಿಯಲ್ಲಿ ತನಿಖೆ ನಡೆಯುತ್ತಿದ್ದು, ವರದಿ ಬಂದ ಮೇಲೆ ನೋಡೋಣ. ಯಾವುದೇ ರೀತಿಯ ಮುಜುಗರ ಬಂದ್ರೂ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಈಗ ಸದ್ಯಕ್ಕೆ ಉಪಚುನಾವಣೆ ಮಾಡೋಣ, ಅದರ ಬಗ್ಗೆ ಚರ್ಚೆ ಬೇಡ ಎಂದರು.
ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ ಸಿಡಿ ಪ್ರಕರಣ ಉಪಚುನಾವಣೆಯಲ್ಲಿ ಬಿಜೆಪಿಗೆ ಮೈನಸ್ ಆಗುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕತ್ತಿ, ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರು, ಕಾಂಗ್ರೆಸ್ ಪಕ್ಷದ ಹಿರಿಯರು. ಅವರಿಗೆ ಮಾತನಾಡಲು ಬೇರೆ ವಿಷಯ ಇಲ್ಲ, ಹೀಗಾಗಿ ಮಾತನಾಡ್ತಾರೆ ಎಂದರು.
ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕೆ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಭೀಮಶಿ ಜಾರಕಿಹೊಳಿ ಕೂಡ ಬರುತ್ತಾರೆ. ಭೀಮಶಿ ಜಾರಕಿಹೊಳಿ ಸಹ ನಮ್ಮ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಇಂದು ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಎರಡೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ. ದಿ.ಸುರೇಶ್ ಅಂಗಡಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಈ ಭಾಗದಲ್ಲಿ ಮಾಡಿದ್ದಾರೆ. ಸುರೇಶ್ ಅಂಗಡಿ ಧರ್ಮಪತ್ನಿ ಕಣದಲ್ಲಿದ್ದು, ನಾವೆಲ್ಲರೂ ಕೂಡಿ ಅವರನ್ನ ಗೆಲ್ಲಿಸುತ್ತೇವೆ. ಮಂಗಲ್ ಅಂಗಡಿ ನಮ್ಮ ಅಕ್ಕ ಇದ್ದಂಗೆ. ನಮ್ಮಕ್ಕ ಸ್ಪರ್ಧೆ ಮಾಡಿದಾಗ ನಾವೆಲ್ಲರೂ ಸಹ ಉಸ್ತುವಾರಿವಾರಿಗಳೇ. ಅವರನ್ನ ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.