ಚಿಕ್ಕೋಡಿ(ಬೆಳಗಾವಿ):ಆಹಾರ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿಯವರು 62ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಸಚಿವರ ಹುಟ್ಟುಹಬ್ಬಕ್ಕೆ ಒಂದು ಲಕ್ಷಕ್ಕೂ ಹೆಚ್ಚಿನ ಜನ ಸಾಕ್ಷಿಯಾಗಿದ್ದರು.
ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಚಿವ ಕತ್ತಿ ಹುಕ್ಕೇರಿ ಪಟ್ಟಣದ ವಿಶ್ವರಾಜ ಭವನದಲ್ಲಿ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನ ಉಮೇಶ್ ಕತ್ತಿ ಆಚರಿಸಿಕೊಂಡರು. ಕಾರ್ಯಕ್ರಮದಲ್ಲಿ ಸಚಿವರ ಧರ್ಮ ಪತ್ನಿ, ಸಹೋದರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು. ಈ ವೇಳೆ ಕ್ಷೇತ್ರದ ಸಾವಿರಾರು ಜನರು ಪುಷ್ಪಗುಚ್ಛ ನೀಡಿ ಶುಭಾಶಯ ಕೋರಿದರು.
ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಗೆ ಸಚಿವರು ಭೋಜನ ವ್ಯವಸ್ಥೆ ಮಾಡಿದ್ದು, ಮಹಿಳೆಯರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚಿನ ಜನರು ಆಗಮಿಸಿ ಭೋಜನ ಸವಿದರು. ಇದಲ್ಲದೇ ಮೈಸೂರಿನಿಂದ ಆಗಮಿಸಿದ್ದ ಕಲಾ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಬಳಿಕ ಮಾತನಾಡಿದ ಕತ್ತಿ ಸಹೋದರ ರಮೇಶ್ ಕತ್ತಿ, ಹುಕ್ಕೇರಿ ಮತಕ್ಷೇತ್ರದ ಜನರ ಆಶೀರ್ವಾದದಿಂದ 8 ಬಾರಿ ಉಮೇಶ್ ಕತ್ತಿಯವರು ಶಾಸಕರಾಗಿದ್ದಾರೆ. ಹೀಗಾಗಿ ಕ್ಷೇತ್ರದ ಜನರಿಗೆ ಭೋಜನ ವ್ಯವಸ್ಥೆ ಮಾಡುವುದರ ಜೊತೆಗೆ ಆಶೀರ್ವಾದ ಪಡೆಯುವುದಕ್ಕಾಗಿ ಈ ಅದ್ಧೂರಿ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ ಎಂದರು.
ಇದನ್ನೂ ಒದಿ: ರಾಜ್ಯದಲ್ಲಿಂದು 106 ಮಂದಿಗೆ ಕೋವಿಡ್ ದೃಢ; ನಾಲ್ವರು ಸೋಂಕಿತರ ಸಾವು