ಬೆಳಗಾವಿ: ಬೆಳಗಾವಿಯ ಸಾಂಬ್ರಾ ಏರ್ಪೋರ್ಟ್ನಲ್ಲಿ ಸಚಿವರ, ಶಾಸಕರು ಹಾಗೂ ಸಂಸದರು ಸೇರಿದಂತೆ ಸಾವಿರಾರು ಬೆಂಬಲಿಗರು ಉಮೇಶ್ ಕತ್ತಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಸಾಂಬ್ರಾ ಏರ್ಪೋರ್ಟ್ ಬಳಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ.
ಮಠಾಧೀಶರಿಂದ ಮಂತ್ರ ಪಠಣ: ಸಾಂಬ್ರಾ ವಿಮಾನ ನಿಲ್ದಾಣದಲ್ಲಿ 10 ನಿಮಿಷಗಳ ಕಾಲ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಹತ್ತಕ್ಕೂ ಅಧಿಕ ಮಠಾಧೀಶರಿಂದ ಮಂತ್ರ ಪಠಣ ನೆರವೇರಿತು. ಉಮೇಶ್ ಕತ್ತಿ ಸಹೋದರ ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಅಂತಿಮ ದರ್ಶನದ ಬಳಿಕ ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿಯತ್ತ ಪಾರ್ಥಿವ ಶರೀರ ರವಾನಿಸಲಾಯಿತು. ರಸ್ತೆ ಉದ್ದಕ್ಕೂ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.